ಆತ್ಮೀಯರೆ
ವಿವೇಕಹಂಸದ ೨೦ ವರ್ಷಗಳ ಸತತ ಪ್ರಕಟಣಪರ್ವದಲ್ಲಿ ನಮ್ಮೊಂದಿಗಿದ್ದು ಸಹಕರಿಸಿದ್ದೀರಿ. ತಮಗೆ ವಿವೇಕಹಂಸ ಬಳಗದ ಹೃರ್ತ್ಪೂಕ ಧನ್ಯವಾದಗಳು.
ವಿವೇಕಹಂಸದ ಅನೇಕ ಮೌಲಿಕ ಬರಹಗಳನ್ನು, ಲೇಖನಗಳನ್ನು ಪುಸ್ತಕದ ರೂಪದಲ್ಲಿ ನೀಡಬೇಕೆಂದು ಆಲೋಚಿಸುತ್ತಿದ್ದೆವು. ಹಿಂದೆ ಅಂತಹ ಕೆಲವು ಪುಟ್ಟ ಪುಸ್ತಿಕೆಗಳನ್ನೂ ತಂದೆವು. ವಿವೇಕಹಂಸದ ಆರಂಭದಿಂದಲೂ ಸಂಪಾದಕರಾಗಿ ಅನುಪಮ ಸೇವೆ ಸಲ್ಲಿಸುತ್ತ ಬಂದಿರುವ ಶ್ರೀ ವಿ. ರಘು ಅವರ ಬರಹಗಳನ್ನು ಸಂಪಾದಕೀಯಗಳ ಸೊಗಸನ್ನು ಕುರಿತು ಓದುಗರು ಪತ್ರಗಳ ಮೂಲಕ, ದೂರವಾಣಿಯ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಪತ್ರಿಕೆಯ ೨೦ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದರ ಮೊದಲ ಹತ್ತು ವರ್ಷಗಳ ಸಂಪಾದಕೀಯಗಳನ್ನು ಸಂಗ್ರಹಿಸಿ ‘ಬೇರಿಗೊಂದು ಭೂಮಿ, ಎಲೆಗೊಂದು ಆಕಾಶ(ಭಾಗ-೧)’ ಶೀರ್ಷಿಕೆಯಡಿಯಲ್ಲಿ ಹೊರತರಲಾಗಿದೆ. ಶತಾವಧಾನಿ ಆರ್. ಗಣೇಶ್ ಅವರ ಮುನ್ನುಡಿಯೊಂದಿಗೆ ಆಕರ್ಷಕ ಮುಖಪುಟದೊಡನೆ ಒಟ್ಟು ೧೪೪ ಪುಟಗಳಲ್ಲಿ ಬಹಳ ಸರಳ ಶೈಲಿಯಲ್ಲಿ ಉನ್ನತ ವಿಚಾರಗಳನ್ನು ಮಂಡಿಸಲಾಗಿದೆ.
ಶಿಕ್ಷಣ, ಶಿಕ್ಷಕರು, ಕಲಿಕೆ, ದಿವ್ಯತ್ರಯರ ಜೀವನ-ಚಿಂತನ, ಮಹಾಪುರುಷರ ಮತ್ತು ರಾಷ್ಟ್ರೀಯ ನಾಯಕರ ವ್ಯಕ್ತಿತ್ವದ ಸೊಬಗು, ಹಬ್ಬ ಇತ್ಯಾದಿ ವಿಶೇಷ ದಿನಗಳನ್ನು ಕುರಿತು; ಹೀಗೆ ಹಲವಾರು ಜೀವನವ್ಯಾಪಿ ವಿಚಾರಗಳನ್ನು ಈ ಸಂಪಾದಕೀಯಗಳು ಒಳಗೊಂಡಿವೆ. ಅವುಗಳ ತಲೆಬರಹಗಳು ಕೂಡ ಆಕರ್ಷಕವಾಗಿವೆ, ಮನಸ್ಸೆಳೆಯುವಂತಿವೆ; ‘ವ್ಯಕ್ತಿ ಮತ್ತು ವ್ಯಕ್ತಿತ್ವ’, ‘ದ್ವಂದ್ವ’, ‘ಜೀವನಗಂಗೆ’, ‘ನಡತೆ-ಘನತೆ’, ‘ಜಿತಂ ಜಗತ ಕೇನ?’, ‘ಮನೆ-ಮನ’, ‘ಅಕ್ಕರೆಯ ಸಕ್ಕರೆ’, ‘ತುಂಬಿದ ಕೊಡ’, ‘ಬದುಕಿನ ಗುಟ್ಟು’, ‘ಗಂಟೆಯ ನಂಟು’, ‘ಕೀಲಿ ಕೈ’, ‘ಹಣ-ಗುಣ’, ‘ನಡೆಯುವ ನಾಣ್ಯ’, ‘ಬೇರಿಲ್ಲದ ಬದುಕು’, ‘ನೆನಪು ನಂದಾದೀಪ’.....ಹೀಗೆ ಒಟ್ಟು ೧೨೧ ಸಂಪಾದಕೀಯಗಳು ಈ ಪುಸ್ತಕದಲ್ಲಿ ಅಡಕಗೊಂಡಿವೆ.
ಪುಸ್ತಕವನ್ನು ಕುರಿತು ಶತಾವಧಾನಿ ಆರ್. ಗಣೇಶ್ ಅವರು ಹೀಗೆಂದಿದ್ದಾರೆ: “...... ಇಲ್ಲಿ ಶುಷ್ಕತೆಯ ಸೋಂಕೂ ಇಲ್ಲದೆ, ಕೃತಕತೆಯ ಕುಹಕವೂ ಇಲ್ಲದೆ ಮನದಾಳದ ಬೆಳಕು ಮಾತಾಗಿದೆ, ಆದುದರಿಂದಲೇ ಇವುಗಳನ್ನು ಮತ್ತೆ ಮತ್ತೆ ಓದುವಾಗಲೂ ಬೇಸರ ಮೂಡದು; ಕಾಲಬಾಹುಳ್ಯತೆಯ ಕಾವಳ ಕವಿಯದು. ಇದು ಏಕಕಾಲದಲ್ಲಿ ವಾಸ್ತವದ ವಸುಂಧರೆಯೂ ಆದರ್ಶಗಳ ಆಕಾಶವೂ ಆಗಿ ನಮ್ಮ ಭವದ ಬೇರುಗಳನ್ನೂ ಭಾವದ ಹೂವುಗಳನ್ನೂ ಹಮ್ಮಿಕೊಳ್ಳಲು ಹದವಾಗಿ ಒದಗಿಬರುತ್ತವೆ......’’ ಒಟ್ಟಿನಲ್ಲಿ ಇದೊಂದು ಸಂಗ್ರಹಯೋಗ್ಯ ಗ್ರಂಥವಾಗಿದೆ. ವಿದ್ಯಾರ್ಥಿಗಳಿಗೆ, ಯುವಜನರಿಗೆ ಉಡುಗೊರೆಯಾಗಿ ಕೊಟ್ಟರಂತೂ ಅದು ಅವರ ಜೀವನಕ್ಕೆ ದಿಗ್ದರ್ಶಕವಾಗಬಲ್ಲದು.
ಸಹೃದಯಿ ಓದುಗಬಂಧುಗಳಿಗೆ ೧೦೦/-ರೂ. ಮುಖಬೆಲೆಯ ಈ ಪುಸ್ತಕವನ್ನು ಕೇವಲ ೮೦/- ರೂ.ಗಳಿಗೆ (ಸಾಮಾನ್ಯ ಅಂಚೆವೆಚ್ಚ ಸೇರಿ) ವಿವೇಕಹಂಸ ಪ್ರಕಾಶನ ಕಳಿಸಿಕೊಡುತ್ತದೆ. ಎಂ. ಓ. ಮುಖಾಂತರ ಹಣ ಕಳಿಸುವವರು ತಮ್ಮ ವಿಳಾಸವನ್ನು ಈ ಮೇಲ್ ಅಥವಾ ಇತರ ಮಾಧ್ಯಮದ ಮೂಲಕ ತಿಳಿಸತಕ್ಕದ್ದು.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕವನ್ನು ಬರಮಾಡಿಕೊಳ್ಳಬೇಕೆಂದು ಕೋರುತ್ತೇವೆ. ಶಾಲಾ-ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಸಮಾರಂಭಗಳಲ್ಲಿ ಬಹುಮಾನವಾಗಿ, ಉಪನಯನ ಇತ್ಯಾದಿ ಸಂದರ್ಭಗಳಲ್ಲಿ ಉಡುಗೊರೆಯಾಗಿ/ಗ್ರಂಥತಾಂಬೂಲವಾಗಿ ಈ ಉಪಯುಕ್ತ ಪುಸ್ತಕವನ್ನು ನೀಡಬಹುದು. ಈ ಬಗೆಯಾಗಿ ೫೦ಕ್ಕೂ ಹೆಚ್ಚಿನ ಪ್ರತಿಗಳನ್ನು ಕೊಳ್ಳಲು ಬಯಸುವವರು ಪತ್ರಿಕೆಯ ಕಾರ್ಯಾಲಯವನ್ನು ಸಂಪರ್ಕಿಸಿ ಮತ್ತೂ ಹೆಚ್ಚಿನ ರಿಯಾಯಿತಿ ಪಡೆಯಬಹುದು.
ತಮ್ಮ ಸಲಹೆ ಸಹಕಾರಗಳನ್ನು ಸದಾ ಬಯಸುವ
ತಮ್ಮ ವಿಶ್ವಾಸಿ
ವಿವೇಕಹಂಸ ಬಳಗ.