EDITORIAL JULY 2012

5 views
Skip to first unread message

Raghu Venkatachalaiah

unread,
Jul 5, 2012, 4:09:38 AM7/5/12
to vija...@googlegroups.com

Regards

Raghu V

ಸಂಪಾದಕೀಯ ಜುಲೈ ೨೦೧೨

ಕಥೆಯಾಗದ ಬದುಕು

ಪದವಿ ತರಗತಿಯಲ್ಲಿನ ಮಕ್ಕಳನ್ನು ಪ್ರತಿವರ್ಷದ ತರಗತಿಗಳ ಆರಂಭದಲ್ಲಿ ಪ್ರಶ್ನೆ ಕೇಳುತ್ತೇನೆ, “ನೀವು ನಿಮ್ಮ ಅಪ್ಪ-ಅಮ್ಮಂದಿರಿಂದ ಅಥವಾ ಅಜ್ಜ-ಅಜ್ಜಿಯರಿಂದ ಕಥೆ ಕೇಳಿದ್ದೀರಾ, ಕೇಳಿರುವಿರಾದರೆ ಕೈ ಎತ್ತಿ?” ಆಶ್ಚರ್ಯವೆಂದರೆ ಈ ಪ್ರಶ್ನೆಗೆ ಕೈ ಎತ್ತುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಈ ವರ್ಷ ಒಂದು ತರಗತಿಯಲ್ಲಿ ಒಬ್ಬರೂ ಕೈ ಎತ್ತಲಿಲ್ಲ! ಬಾಲ್ಯದ ಕಗ್ಗೊಲೆ ಇದೆಂದು ನನ್ನ ಅಭಿಪ್ರಾಯ. ಹೌದು, ಅಮ್ಮ-ಅಪ್ಪ ಅಥವಾ ಅಜ್ಜ-ಅಜ್ಜಿಯರ ಮಡಿಲಿನಲ್ಲಿ ಕುಳಿತು ಕಥೆ ಕೇಳುತ್ತಾ ಹೂಂಗುಡುದ ಬಾಲ್ಯ ಒಂದು ಬಾಲ್ಯವೆ? ರಾತ್ರಿಯ ನೀರವದಲ್ಲಿ ಅಮ್ಮ ಅಥವಾ ಅಜ್ಜಿಯ ಪ್ರೀತಿಯ ಸೆರಗು ಹೊಚ್ಚಿಕೊಂಡು ಕಥೆ ಕೇಳುತ್ತಾ ಇರುವಾಗ ಅವರ ದನಿ ದೂರ ಸಾಗಿ ಕಥೆಯೂ ಕನಸೂ ಒಂದಾಗುವ ನಿದ್ರೆಯಲ್ಲಿ ಜಾರಿಹೋಗುವ ಸುಖದ ಮುಂದೆ ಮತ್ತೇನು ಬೇಕಿದೆ? ಅಮ್ಮ ಹೇಳಿದ ಹೊಳೆಪಟ್ಣದ ರಾಕ್ಷಸಿ ಕಥೆಯ ರಾಕ್ಷಸಿ ಇಂದೂ ಕನಸಿನಲ್ಲಿ ಹೆದರಿಸುತ್ತಾಳೆ, ಅಜ್ಜಿ ಹೇಳಿದ ದೀಪದ ಮಲ್ಲಿಯ ಕಥೆಯ ಗೊಂಬೆಗಳು ಈಗಲೂ ಕನಸಿನಲ್ಲಿ ಮಾತಾಡುತ್ತವೆ. ಅಪ್ಪ ಹೇಳಿದ್ದ ರಿಪ್ ವಾನ್ ವಿಂಕಲ್ ಕಥೆಯ ಕಿನ್ನರ ಕುಳ್ಳರನ್ನು ಇಂದಿಗೂ ಹುಡುಕುತ್ತಿದ್ದೇನೆ. ಮುಂದೆ ನಾನೇ ಓದಿದ ಚಂದಮಾಮದ ಕಥೆಗಳು, ಅರೇಬಿಯಾದ ಕಥೆಗಳು, ಜಾತಕದ ಕಥೆಗಳು, ರಾಮಕೃಷ್ಣಾಶ್ರಮದ ವಿವೇಕಾನಂದ ಬಾಲಕ ಸಂಘದಲ್ಲಿ ಕೇಳಿದ ಕಥೆಗಳು ಬಾಲ್ಯವನ್ನು ರೋಮಾಂಚನಗೊಳಿಸಿದರೆ ಒಟ್ಟಾರೆಯಾಗಿ ಇವು ನನ್ನ ಜೀವನದ ಬೇರುಗಳನ್ನು ಆಳಕ್ಕೆ ಇಳಿಸಿವೆ. ಬಾಲ್ಯದ ಕೈತುತ್ತಿನಷ್ಟೇ ಮುಖ್ಯ ಈ ಕಥೆಗಳು. ಜಗದ ಸೋಜಿಗದೊಂದಿಗೆ ಮನುಷ್ಯಲೋಕದ ವೈವಿಧ್ಯವನ್ನು, ಮನುಷ್ಯ ಜಾತಿಯ ಹಲವು ಸ್ವಭಾವಗಳನ್ನು ಬಿಚ್ಚಿಡುತ್ತದೆ ಕಥಾಲೋಕ. ಬದುಕಿನ ಬೆಳಕನ್ನು ಪೂರ್ಣವಾಗಿ ಆನಂದಿಸಬೇಕಾದರೆ ಬಾಲ್ಯವು ಕಥಾಲೋಲಕದ ಮೂಲಕ ಹಾದು ಬರಬೇಕು.

ಮಕ್ಕಳ ಮನೋವಿಕಾಸದಲ್ಲಿ ಕಥೆ ಬಹುಮುಖ್ಯಪಾತ್ರವಹಿಸುತ್ತದೆ. ಮನಸ್ಸು ಸರ್ಜನಶೀಲವಾಗಬೇಕಾದರೆ ಅದು ಚೆನ್ನಾಗಿ ಭಾವವಿಸ್ತಾರವನ್ನು ಅನುಭವಿಸಬೇಕು. ಹೀಗಾಗಲು ಅವರಿಗೆ ಬಹುವಿಧದ ಕಥೆಗಳನ್ನು ಹೇಳಬೇಕು. ಯಾವ ಜೀವಕ್ಕೆ ಎಳವೆಯಲ್ಲಿಯೇ ಬದುಕಿನ ನೂರುಸ್ವರದ ಪರಿಚಯವಿರುತ್ತದೊ ಅದು ಮುಂದೆ ನಿಜದ ಸಂಗೀತವನ್ನು ಆನಂದಿಸಬಲ್ಲುದು,  ಬದುಕಿನ ಕರ್ಕಶ ರಾಗವನ್ನು ಕೇಳಿ ಕಂಗೆಡದೆ ಬಾಳಬಲ್ಲದು. ಕಥೆ ಸುಳ್ಳಾದರೂ ಅದು ಬದುಕಿಗೆ ಕಟ್ಟಿಕೊಡುವ ರಮ್ಯತೆ ಅನನ್ಯವಾದದು. ಕಥೆ ಸುಳ್ಳು ಎಂಬ ಅರಿವು ಮೂಡುವುದರೊಳಗೆ ಅದು ತನ್ನ ಪ್ರಭಾವ ಬೀರಿರುತ್ತದೆ. ಕಥೆ ಹೇಳದಿದ್ದರೆ ಮಕ್ಕಳು ದೂರದರ್ಶನದ ಮುಂದೆ ಕೂರುತ್ತಾರೆ. ಟಾಮ್ ಮತ್ತು ಜೆರ್ರಿ ಎಂಬ, ಕ್ರೂರತೆಯನ್ನು ವಿಧವಿಧವಾಗಿ ಬಿಂಬಿಸುವ ಕಾರ್ಟೂನ್ ನೋಡುತ್ತಾರೆ, ಚೋಟಾ ಭೀಮ್ ಎಂಬ ಹುಂಬ ಕಥಾನಕ ನೋಡುತ್ತಾರೆ. ಇವುಗಳಿಂದ ಮನರಂಜನೆಯಾದೀತೆ ಹೊರತು ಮನೋವಿಕಾಸವಾಗುವುದಿಲ್ಲ. ಕಥೆಕೇಳದ, ಕಥೆಯಾಗದ ಇಂತಹವರ ಬದುಕು ವ್ಯಥೆಯಾಗುತ್ತದೆ. ದುರ್ಬಲ ವ್ಯಕ್ತಿತ್ವ ಹೊಂದಿ ಬದುಕಿನ ಪ್ರತಿಹೆಜ್ಜೆಗೂ ಬೆಚ್ಚಿ ಬೀಳುವ ಇಂದಿನ ಜನಾಂಗದ ಹಿಂದೆ ಹಿರಿಯರ ಸೋಮಾರಿತನದ ವ್ಯಥೆಯಿದೆ. ಕಥೆ ಹೇಳುವುದನ್ನು ಹೊರಗುತ್ತಿಗೆ ಕೊಡಲಾಗುವುದಿಲ್ಲ. ಅದು ಪ್ರತಿಯೊಂದು ಮಗು ಮತ್ತು ಪೋಷಕರ ನಡುವಿನ ಅಪೂರ್ವ ಮಾನಸಿಕ ಏಕಾಂತದ ಲೋಕ. ಕಥೆಯಿಂದ ಖುಷಿಗೊಂಡು ಹೂಂಗುಡುವ ಪ್ರತಿ ಮಗುವಿನಲ್ಲಿಯೂ ಬಾಲಕೃಷ್ಣನೇ ಇರುತ್ತಾನೆ ಎಂದು ಭಾವಿಸಬೇಕು. ಮಗಳಿಗೆ ಕಥೆ ಹೇಳಿ ಬೆಳಸಿದ ತೃಪ್ತಿಯಿದೆ. ತುಂಬ ದಣಿವಾದಾಗಲೂ ಕಥೆ ಹೇಳಹೊರಟು ನನಗೇ ನಿದ್ದೆಯಾವರಿಸಿ ಕಥೆ ದಿಕ್ಕುತಪ್ಪಿದಾಗ ಅವಳೇ ಅದನ್ನು ತಿದ್ದಿದ ನೆನಪೂ ಇದೆ. ಮಕ್ಕಳ ನೆನಪಿನ ಶಕ್ತಿ, ಆಲೋಚನಾ ಶಕ್ತಿ, ಕಲ್ಪನಾ ಶಕ್ತಿ ಹೆಚ್ಚಬೇಕಾದರೆ ಅವರಿಗೆ ಹೆಚ್ಚು ಹೆಚ್ಚು ಕಥೆ ಹೇಳಬೇಕು. ಪದವಿ ತರಗತಿಯಲ್ಲೂ ಪುಟ್ಟ ಕಥೆ ಹೇಳುವಾಗ, ಆ ಮಕ್ಕಳ ಮುಗ್ಧಕಣ್ಣುಗಳಲ್ಲಿ ಕಥೆ ಕೇಳುವ ಹಸಿವು ಕಂಡಾಗ ಪೂರ್ವಕಾಲದ ಋಷಿಯಂತೆ ಮಂತ್ರಜಲ ಸಿಂಪಡಿಸಿ ಅವರನ್ನೆಲ್ಲ ಕಂಕುಳಕೂಸಾಗಿಸಿ ಕಥೆ ಹೇಳಿ ರಮಿಸುವ ಆಸೆಯಾಗುತ್ತದೆ. ನೀವೂ ಕೈಜೋಡಿಸಬೇಕು; ದಯವಿಟ್ಟು ಮಾತುಕೊಡಿ, ನಿಮ್ಮ ಮಗುವಿಗೆ, ಅದು ಪದವಿ ತರಗತಿಯಲ್ಲಿದ್ದರೂ ಚಿಂತೆಯಿಲ್ಲ ಕಥೆ ಹೇಳಿ ಬೆಳೆಸುತ್ತೇನೆ ಎಂದು ನನಗೆ ಮಾತುಕೊಡಿ!

 



ಸಂಪಾದಕೀಯ ಜುಲೈ ೨೦೧೨.pdf

Srikanth, Nittuvenkataram

unread,
Jul 6, 2012, 12:41:09 AM7/6/12
to vija...@googlegroups.com

Good Editorial.

 

Regards

Srikanth

--
You received this message because you are subscribed to the Google Groups "vijaya88" group.
To post to this group, send an email to vija...@googlegroups.com.
To unsubscribe from this group, send email to vijaya88+u...@googlegroups.com.
For more options, visit this group at http://groups.google.com/group/vijaya88?hl=en-GB.

Raghu Venkatachalaiah

unread,
Jul 6, 2012, 1:37:33 PM7/6/12
to vija...@googlegroups.com
Thanks Srikanth.

Raghu V

2012/7/6 Srikanth, Nittuvenkataram <Nittuvenkata...@wrigley.com>
Reply all
Reply to author
Forward
0 new messages