ಬೆಂಗಳೂರು, ಆಗಸ್ಟ್ 18 (ಕರ್ನಾಟಕ ವಾರ್ತೆ):
ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಜ್ಞಾನ ದಾಸೋಹಿ ಡಾ:ಶರಣಬಸವಪ್ಪ ಅಪ್ಪ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ನಿಧನ ಹೊಂದಿರುವುದನ್ನು ತಿಳಿಸಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರು ವಿಧಾನ ಸಭೆಯಲ್ಲಿ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ನಲ್ಲಿ ಸಂತಾಪ ನಿರ್ಣಯವನ್ನು ಮಂಡಿಸಿ ಸಂತಾಪ ವ್ಯಕ್ತಪಡಿಸಿದರು.
ವಿಧಾನಸಭೆಯ ಸಚಿವರಾದ ಶಿವಾನಂದ ಪಾಟೀಲ್ ರವರು ಡಾ:ಶರಣಬಸವಪ್ಪ ಅಪ್ಪ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ಸಂತಾಪ ಸೂಚನೆಗೆ ಬೆಂಬಲ ವ್ಯಕ್ತಪಡಿಸಿ ಡಾ:ಶರಣಬಸವಪ್ಪ ಅಪ್ಪ ಅವರು 14-11-1935ರಂದು ಜನಿಸಿದ್ದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ನಂತರ ಅದೇ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು, ಶರಣಬಸವೇಶ್ವರ ದೇವಸ್ಥಾನದ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದ ಶ್ರೀಯುತರು ಆಧ್ಯಾತ್ಮ ವಿಷಯ ಸೇರಿದಂತೆ ಹಲವು ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಶ್ರೀಯುತರು ಶರಣಬಸವೇಶ್ವರ ವಿಶ್ವವಿದ್ಯಾಲಯ, ಶರಣಬಸವೇಶ್ವರ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್, ಅಪ್ಪ ಪಬ್ಲಿಕ್ ಸ್ಕೂಲ್, ಗೋದುತಾಯಿ ಮಹಿಳಾ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸೇರಿದಂತೆ 60 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಸುವ ಮೂಲಕ ಕಲಬುರಗಿಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು. 1963 ರಲ್ಲಿ ಅಖಿಲ ಭಾರತ ಶಿವಾನುಭವ ಮಂಟಪ ಸ್ಥಾಪನೆ, ದಾಸೋಹ ಜ್ಞಾನರತ್ನ ಸಾಹಿತಿಕ ಪಾಕ್ಷಿಕ ಪತ್ರಿಕೆಗಳನ್ನು ಪ್ರಾರಂಭಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಡ್ ಪ್ರಶಸ್ತಿಗಳಲ್ಲದೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಶ್ರೀ ಚಂದ್ರಶೇಖರನಾಥ ಸ್ವಾಮೀಜು ಅವರು ದಿ: 10-02-1945ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಹಳ್ಳಿಯೊಂದರಲ್ಲಿ ಜನಿಸಿದ್ದರು. ಬಿ.ಕಾಂ ಪದವೀಧರರಾಗಿದದ ಶ್ರೀಯುತರು ಬೆಂಗಳೂರಿನ ತಿರುಚ್ಚಿ ಕೈಲಾಸಾಶ್ರಮದಲ್ಲಿ ಸಂಸ್ಕೃತ ವೇದ ಅಧ್ಯಯನ ಮಾಡಿದ್ದರು. 1968ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಅವರು 1983ರಲ್ಲಿ ಕೆಂಗೇರಿ ಬಳಿ 10 ಎಕರೆ ಜಮೀನಿನಲ್ಲಿ ಶ್ರೀ ಗುರು ಜ್ಞಾನ ಕೇಂದ್ರ ಟ್ರಸ್ಟ್ ಹೆಸರಿನಲ್ಲಿ ಪತ್ಯೇಕವಾಗಿ ಶಾಲೆ ಕಾಲೇಜು ಪ್ರಾರಂಭಿಸಿದ್ದರು. ಶ್ರೀಯುತರು ಕಲ್ಯಾಣ ಕರ್ನಾಟಕದ ಬೆಳಕು ಡಾ: ಶರಣಬಸವಪ್ಪ ಅಪ್ಪ ಅವರು ದಿ: 14-08-2025ರಂದು ನಿಧನ ಹೊಂದಿರುತ್ತಾರೆ. ಇವರ ನಿಧನವು ಇಡೀ ರಾಜ್ಯವು ಕಂಬನಿ ಮಿಡಿದಿದೆ. ಆಧ್ಯಾತ್ಮಿಕ ಗುರುಗಳಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ದಿ: 16-08-2025ರಂದು ನಿಧನ ಹೊಂದಿರುತ್ತಾರೆ. ಇಬ್ಬರು ಪರಮಪೂಜ್ಯರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ ಎಂದು ತಿಳಿಸಿ ಈರ್ವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ತಿಳಿಸಿ ಸಂತಾಪಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಇಬ್ಬರು ಶರಣರು ವಿದ್ಯಾ ಹಾಗೂ ಅನ್ನ ದಾಸೋಹಕ್ಕೆ ಹಾಗೂ ಜನತೆಯ ದು:ಖ ದುಮ್ಮಾನಗಳಿಗೆ ಸದಾ ಸ್ಪಂದಿಸುತ್ತಿದ್ದರು. ತಮ್ಮ ಬೋಧನೆಗಳ ಮೂಲಕ ಜನರ ಸಮಸ್ಯೆಗಳಿಗೆ ತಮ್ಮ ಬೋಧನೆಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಶರಣಬಸವಪ್ಪ ಅಪ್ಪ ಅವರು ಶರಣಬಸವೇಶ್ವರ ದೇವಸ್ಥಾನದ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದರು. 60ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯುವುದರ ಮೂಲಕ ಅಭೂತ ಸಾಧನೆ ಮಾಡಿದ್ದರು. 26 ಎಕರೆ ವಿಸ್ತೀರ್ಣದಲ್ಲಿ ಗೋಶಾಲೆ ನಿರ್ಮಾಣ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಅವರು 1968ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದ ಅವರು 1983ರಲ್ಲಿ ಕೆಂಗೇರಿ ಬಳಿ 10 ಎಕೆರೆ ಜಮೀನಿನಲ್ಲಿ ಶ್ರೀ ಗುರು ಜ್ಞಾನಕೇಂದರ ಟ್ರಸ್ಟ್ ಹೆಸರಿನಲ್ಲಿ ಪ್ರತ್ಯೇಕವಾಗಿ ಶಾಲೆ, ಕಾಲೇಜು ಪ್ರಾರಂಭಿಸಿದ್ದರು. 2002ರಲ್ಲಿ ಅದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠ ಎಂದು ಪ್ರಚಾರಪಡೆಯಿತು. ಸನಾತನ ಸಂಸ್ಕೃತಿ ಹಾಗೂ ಪರಂಪರೆಗಳ ರಕ್ಷಕರಾಗಿದ್ದ ಶ್ರೀಯುತರು ಹಲವು ಸಾಮಾಜಿಕ ಚಳುವಳಿಗಳ ನೇತೃತ್ವ ವಹಿಸಿದ್ದರು. ಇಬ್ಬರೂ ಕೂಡ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ತಿಳಿಸಿ ಸಂತಾಪಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರುಗಳಾದ ಅರವಿಂದ ಬೆಲ್ಲದ್, ಶರಣ್ ಕುಮಾರ್ ಕುಂದಾಪುರ, ಅರಗ ಜ್ಞಾನೇಂದ್ರ, ಅಲ್ಲಮಪ್ರಭು ಪಾಟೀಲ್, ಶರತ್ ಬಚ್ಚೇಗೌಡ, ಜಿ.ಟಿ ದೇವೇಗೌಡ, ಡಾ ಉಮೇಶ್ ಜಿ. ಜಾಧವ್, ಹಾಗೂ ಇನ್ನಿತರ ಶಾಸಕರು ಡಾ:ಶರಣಬಸಪ್ಪ ಅಪ್ಪ ಹಾಗೂ ಚಂದ್ರಶೇಖರ ಸ್ವಾಮೀಜಿ ಇವರುಗಳು ಸಂತಾಪ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ತಮ್ಮ ಸಂತಾಪ ವ್ಯಕ್ತಪಡಿಸಿದರು.
ವಿಧಾನಪರಿಷತ್ ನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿರಾದ ಡಾ: ಶರಣ್ ಪ್ರಕಾಶ್ ರುದ್ರಪ್ಪ ಪಾಟೀಲ್, ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ಪರಿಷತ್ ಸದಸ್ಯರಾದ ತಳವಾರ ಸಾಬಣ್ಣ, ದಿನೇಶ್ ಗೂಳೀಗೌಡ, ಶಶಿಲ್ ನಮೋಶಿ ಅವರು ಬೆಂಬಲ ವ್ಯಕ್ತಪಡಿಸಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.
ನಂತರ ಉಭಯ ಸದನಗಳಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಿ, ನಂತರ ಸದನಲ್ಲಿ ಪ್ರಸ್ತಾಪಿತ ಸಂತಾಪ ಸೂಚನೆಯ್ನು ಮೃತಗಣ್ಯರ ಕುಟುಂಬಕ್ಕೆ ಕಳುಹಿಸಲಾಯಿತು.
ಹೊಸಕೋಟೆ ತಾಲ್ಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಸ್ಥಾಪನೆಗೆ ಶೀಘ್ರ ಕ್ರಮ-ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು,ಆಗಸ್ಟ್ 18 (ಕರ್ನಾಟಕ ವಾರ್ತೆ)
ಹೊಸಕೋಟೆ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಕೆ.ಎಸ್.ಆರ್.ಟಿಸಿ ಬಸ್ ಡಿಪೋವನ್ನು ಶೀಘ್ರದಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ಇವರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಒಟ್ಟು 83 ಘಟಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದಲ್ಲಿ ಎರಡು ಘಟಕಗಳಿವೆ. ಹೊಸಕೋಟೆಯಲ್ಲಿ 3.08 ಎಕರೆ/ಗುಂಟೆ ವಿಸ್ತೀರ್ಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೇಯ ಘಟಕವಿದೆ. ಹೊಸಕೋಟೆ ತಾಲ್ಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಸ್ಥಾಪನೆ ಮಾಡಿಕೊಡಲು ಶಾಸಕರು 2.50 ಎಕರೆ ಜಾಗವನ್ನು ಗುರುತಿಸಿದ್ದಾರೆ, ಸದರಿ ವಿಷಯವನ್ನು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿ ಬಸ್ ಡಿಪೋ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ವಿಧಾನಸಭೆಯಲ್ಲಿ ಉತ್ತರಿಸಿದರು.
ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಗಾಗಿ ಬಗರ್ ಹುಕುಂ ತಂತ್ರಾಂಶ ಜಾರಿ-ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು,ಆಗಸ್ಟ್ 18 (ಕರ್ನಾಟಕ ವಾರ್ತೆ)
ಅನಧಿಕೃತ ಸಾಗುಳಿ ಸಕ್ರಮೀಕರಣ ಕೋರಿ ಸಲ್ಲಿಕೆಯಾಗಿರುವ ಹಾಗೂ ಸಮಿತಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ನಿರ್ವಹಿಸಲು ಬಗರ್ ಹುಕುಂ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ನಂಜೇಗೌಡ ಕೆ.ವೈ ಇವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಬಗರ್ ಹುಕುಂ ತಂತ್ರಾಂಶ ಜಾರಿಯಿಂದಾಗಿ ಅರ್ಜಿಗಳನ್ನು ಶೀಘ್ರವಾಗಿ ಹಾಗೂ ಪಾರದರ್ಶಕವಾಗಿ ಪರಿಶೀಲಿಸಿ ಸಮಿತಿಯ ಮುಂದೆ ಮಂಡಿಸಲು ಯಾವುದೇ ಲೋಪವಿಲ್ಲದಂತೆ ಅರ್ಹ ಸಾಗುವಳಿದಾರರಿಗೆ ಸಾಗುವಳಿ ಚೀಡಿ ನೀಡುವುದು ಖಾತೆ ದಾಖಲೀಕರಿಸುವುದು, ಪೋಡಿ ಪ್ರಕ್ರಿಯೆಗೊಳಪಡಿಸಿ ನೋಂದಣಿ ಕಚೇರಿಯಲ್ಲಿ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಿಸಿ ಮಂಜೂರಿದಾರರಿಗೆ ಪಹಣಿ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ನಮೂನೆ 57ರಡಿ ಮಂಜೂರು ಮಾಡಲು ಒಟ್ಟು 1852 ಅರ್ಜಿಗಳುಬಾಕಿ ಇರುತ್ತವೆ. ಬಾಕಿ ಉಳಿದಿರುವ ಅರ್ಜಿಗಳನ್ನು ಮುಂದಿನ ಆರು ತಿಂಗಳ ಕಾಲಮಿತಿಯೊಳಗಾಗಿ ನಿಯಮಾನುಸಾರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಪರಶುರಾಂಪುರ ಹೋಬಳಿ ಕೇಂದ್ರವನ್ನು ಹೊಸ ತಾಲ್ಲೂಕಾಗಿ ಸೃಜಿಸಲು ಕ್ರಮ -ಕಂದಾಯ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು,ಆಗಸ್ಟ್ 18 (ಕರ್ನಾಟಕ ವಾರ್ತೆ)
ಶ್ರೀ ಎಂ ಬಿ ಪ್ರಕಾಶ್ ಸಮಿತಿಯು 2009ರಲ್ಲಿ ಪರಶುರಾಮಪುರ ಹೋಬಳಿ ಕೇಂದ್ರವನ್ನು ಹೊಸ ತಾಲ್ಲೂಕಾಗಿ ಸೃಜಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ. ಆದ್ಯತೆ ಮೇರೆಗೆ ಪರಶುರಾಂಪುರ ಹೋಬಳಿ ಕೇಂದ್ರವನ್ನು ಹೊಸ ತಾಲ್ಲೂಕಾಗಿ ಸೃಜಿಸಲು ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ರಘುಮೂರ್ತಿ ಇವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಪರಶುರಾಂಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಸೃಜಿಸುವ ಪ್ರಸ್ತಾವನೆಯು ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾಗಿರುವುದಿಲ್ಲ ಹಾಗೂ ಹೊಸದಾಗಿ ತಾಲ್ಲೂಕುಗಳನ್ನು ರಚಿಸುವ ವಿಷಯವು ಸರ್ಕಾರದ ಸಾಮಾನ್ಯ ನೀತಿಗೆ ಸಂಬಂಧಿಸಿದ್ದು, ಯಾವುದೇ ತಾತ್ವಿಕ ನಿರ್ಣಯ ಕೈಗೊಂಡಿರುವುದಿಲ್ಲ ಅಲ್ಲದೇ ಆರ್ಥಿಕ ಇಲಾಖೆಯು ಇಂತಹ ಪ್ರಸ್ತಾವನೆಗಳಿಗೆ ಅನುಮತಿ ನೀಡುತ್ತಿರುವುದಿಲ್ಲ. 2018-19 ರಲ್ಲಿ 63 ಹೊಸ ತಾಲ್ಲೂಕುಗಳನ್ನು ಸೃಜನೆ ಮಾಡಲಾಗಿದೆ.
ಶ್ರೀ ಎಂ ಬಿ ಪ್ರಕಾಶ್ ಸಮಿತಿಯು 2009ರಲ್ಲಿ ಪರಶುರಾಂಪುರ ಹೋಬಳಿ ಕೇಂದ್ರವನ್ನು ಹೊಸ ತಾಲ್ಲೂಕಾಗಿ ಸೃಜಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಆದ್ಯತೆ ಮೇಲೆ ತಾಲ್ಲೂಕಾಗಿ ಸೃಜಿಸಲು ಕ್ರಮ ವಹಿಸಲಾಗುವುದು ಎಂದು ಉತ್ತರ ನೀಡಿದರು.
ಮಂಗಳೂರು ವಿಭಾಗಕ್ಕೆ 100 ಸಂಖ್ಯೆಯ 12 ಮೀಟರ್ ಮಾದರಿಯ ವಿದ್ಯುತ್ ಚಾಲಿತ ಬಸ್ ಗಳು ಹಂಚಿಕೆ- ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು,ಆಗಸ್ಟ್ 18 (ಕರ್ನಾಟಕ ವಾರ್ತೆ)
ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ 350 ವಿದ್ಯುತ್ ಚಾಲಿತ ಬಸ್ ಗಳು ಹಂಚಿಕೆಯಾಗಿದ್ದು, ಆ ಪೈಕಿ ಮಂಗಳೂರು ವಿಭಾಗಕ್ಕೆ 100 ಸಂಖ್ಯೆಯ 12 ಮೀಟರ್ ಮಾದರಿಯ ವಿದ್ಯುತ್ ಚಾಲಿತ ಬಸ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಭಾಗೀರಥಿ ಮುರುಳ್ಯ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 5 (ಕ್ಲಬ್ ಕ್ಲಾಸ್ 2.0 ಮಾದರಿಯ 02 ಸೀಟರ್ ಹಾಗೂ ಅಂಬಾರಿ ಉತ್ಸವ ಮಾದರಿಯ 03 ಸ್ಲೀಪರ್ ಹೊಸ ಹವಾ ನಿಯಂತ್ರಿತ ವೋಲ್ವೋ ಮಲ್ಟಿ ಆಕ್ಸಲ್ ಬಸ್ ಗಳನ್ನು ಒದಗಿಸಲಾಗಿರುತ್ತದೆ.
ಸಾರಿಗೆ ನಿಗಮಗಳಿಗೆ 2025-26ನೇ ಸಾಲಿನ ಆಯವ್ಯಯದಲ್ಲಿ 2000 ಡೀಸೆಲ್ ಬಸ್ ಗಳನ್ನು ಖರೀದಿಸುವ ಘೋಷಣೆ ಮಾಡಲಾಗಿದ್ದು, ಸದರಿ ಬಸ್ ಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 900 ಬಸ್ ಗಳನ್ನು ಹಂಚಿಕೆ ಮಾಡಲಾಗಿದ್ದು, ಬಸ್ ಗಳ ಖರೀದಿಗೆ ಅವಶ್ಯವಿರುವ ಅನುದಾನ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ. ಬಸ್ ಗಳನ್ನು ಖರೀದಿ/ಪಡೆದ ನಂತರ ಅಗತ್ಯತೆಯನ್ನು ಪರಿಗಣಿಸಿ ಸುಳ್ಯ ಘಟಕಕ್ಕೆ ಆದ್ಯತೆ ಮೇರೆಗೆ ಪರಿಶೀಲಿಸಿ ಬಸ್ ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಸತಿ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ- ವಸತಿ ಸಚಿವ ಬಿ.ಜಡ್ ಜಮೀರ್ ಅಹ್ಮದ್ ಖಾನ್
ಬೆಂಗಳೂರು,ಆಗಸ್ಟ್ 18 (ಕರ್ನಾಟಕ ವಾರ್ತೆ)
ಮೈಸೂರು ತಾಲ್ಲೂಕಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ನಿರ್ಮಾಣಗೊಂಡ ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಸಮುದಾಯ ಭವನ, ಒಳಚರಂಡಿ, ವಿದ್ಯುತ್ ಸಂಪರ್ಕ, ನೀರಿನ ಸೌಲಭ್ಯ ಇನ್ನಿತರ ಕಾಮಗಾರಿಗಳನ್ನು ನಿರ್ವಹಿಸಲು ಅನುದಾನಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ಕಲಾಪದ ವೇಳೆ ಶಾಸಕರಾದ ದೇವೇಗೌಡ ಜಿ.ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಭಿವೃದ್ಧಿ ಪಡಿಸಲಾದ ಕೊಳಗೇರಿ ಪ್ರದೇಶಗಳನ್ನು ಯೋಜನೆಯ ಮಾರ್ಗಸೂಚಿಯನುಸಾರ ಮುಂದಿನ ನಿರ್ವಹಣೆಗೆ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಬೇಕಾಗಿರುತ್ತದೆ ಹಾಗೂ ಕಟ್ಟಡಗಳ ನಿರ್ವಹಣೆಯನ್ನು Resident Welfare Association” ರವರಿಂದ ನಿರ್ವಹಣೆ ಮಾಡಬೇಕಾಗಿರುತ್ತದೆ. ವಸತಿ ಬಡಾವಣೆಗಳ ಸಮುಚ್ಛಯಗಳ ದುರಸ್ತಿ ಹಾಗೂ ಮೂಲಭೂತ ಸೌಲಭ್ಯವನ್ನು ಒದಗಿಸಲು ರೂ.5.00ಕೋಟಿ ಅಂದಾಜು ಪಟ್ಟಿ ತಯಾರಿಸಿ ನರ್ಮ್-ಬಿ.ಎಸ್.ಯು.ಪಿ ಯೋಜನೆಯಡಿ ಕ್ರೋಡೀಕೃತವಾಗಿರುವ ಬಡ್ಡಿ ಮೊತ್ತದಡಿ ಭರಿಸಲು ಆರ್ಥಿಕ ಇಲಾಖೆಯನ್ನು ಕೋರಲಾಗಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಕೊಳಚೆ ಸುಧಾರಣೆ ಯೋಜನೆಯಡಿ ಒದಗಿಸಲಾಗಿರುವ ಅನುದಾನದಡಿ ಪ್ರಸ್ತುತ ಪ್ರಸ್ತಾವನೆಯನ್ನು ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಹೆಚ್ಚಿಸಿದ ಹಾಲಿನ ಮಾರಾಟ ದರ ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲು ಹಾಲು ಒಕ್ಕೂಟಗಳಿಗೆ ಸೂಚನೆ- ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್
ಬೆಂಗಳೂರು,ಆಗಸ್ಟ್ 18 (ಕರ್ನಾಟಕ ವಾರ್ತೆ)
ಹಾಲು ಉತ್ಪಾದಕರಿಗೆ ಸರ್ಕಾರವು ಪ್ರತಿ ಲೀಟರ್ ಹಾಲಿಗೆ ರೂ. 4/- ಗಳಿಗೆ ಹೆಚ್ಚಿಸಿದ್ದು, ಹೆಚ್ಚಿಸಿದ ಹಾಲಿನ ಮಾರಾಟ ದರವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲು ಎಲ್ಲಾ ಒಕ್ಕೂಟಗಳಿಗೆ ಸೂಚಿಸಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ ವೆಂಕಟೇಶ್ ಅವರು ತಿಳಿಸಿದರು.
ಇಂದು ವಿಧಾನಸಭೆ ಕಲಾಪದ ವೇಳೆಯಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಆರ್ಥಿಕ ಪರಿಸ್ಥಿತಿಯನುಗುಣವಾಗಿ ಒಕ್ಕೂಟಗಳ ಆಡಳಿತ ಮಂಡಳಿ ಸಭೆಗಳಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಹಾಲಿನ ಖರೀದಿ ದರವನ್ನು ಆಯಾ ಒಕ್ಕೂಟಗಳ ಹಂತದಲ್ಲೇ ನಿಗದಿಪಡಿಸಲಾಗುತ್ತಿದ್ದು, ಕಳೆದ 2 ವರ್ಷಗಳಿಂದ ಒಕ್ಕೂಟಗಳು ಖರೀದಿ ದರ ನಿಗದಿಪಡಿಸಲು ಸರ್ಕಾರದಿಂದ ಸೂಕ್ತ ಮಾರ್ಗದರ್ಶನ ಪಡೆಯದೇ ಹೊರತು ದರ ಬದಲಾವಣೆಗೆ ಕ್ರಮ ವಹಿಸಬಾರದೆಂದು ಹಾಗೂ ಹೆಚ್ಚಿಸಿದ ಹಾಲಿನ ಮಾರಾಟ ದರವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲು ಎಲ್ಲಾ ಒಕ್ಕೂಟಗಳಿಗೆ ಸೂಚಿಸಲಾಗಿದೆ.
ಹಾಲು ಉತ್ಪಾದಕರಿಗೆ ಸರ್ಕಾರವು ಪ್ರತಿ ಲೀಟರ್ ಹಾಲಿಗೆ ರೂ. 4/- ಗಳಿಗೆ ಹೆಚ್ಚಿಸಿದ್ದು, ಹೆಚ್ಚಿಸಿದ ಪೂರ್ಣ ಮೊತ್ತವನ್ನು ಉತ್ಪಾದಕರುಗಳಿಗೆ ನೇರವಾಗಿ ಖರೀದಿ ದರದಲ್ಲಿ ಸೇರಿಸಿ ಡಿಬಿಟಿ ಮುಖಾಂತರ ಪಾವತಿಸಲಾಗುತ್ತಿದ್ದು, ಇದರಿಂದಾಗಿ ಹಾಲು ಉತ್ಪಾದಕರಿಗೆ ಲಾಭವಾಗಿರುತ್ತದೆ.
ಕರ್ನಾಟಕ ಹಾಲು ಮಹಾಮಂಡಳಿ ವ್ಯಾಪ್ತಿಯ 16 ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಒಟ್ಟು 8.89 ಲಕ್ಷ ಸಕ್ರಿಯ ಸದಸ್ಯರಿಂದ ಪ್ರಸ್ತುತ ದಿನವೊಂದಕ್ಕೆ 99.06 ಲಕ್ಷ ಕೆ.ಜಿ ಹಾಲು ಶೇಖರಣೆಯಾಗುತ್ತಿದ್ದು, ಶೇ 10 ರಷ್ಟು ಪ್ರಗತಿಯಾಗಿರುತ್ತದೆ. ಪ್ರತಿ ಲೀಟರ್ ಹಾಲಿಗೆ ರೂ. 4/-ಗಳನ್ನು ಹೆಚ್ಚಿಸಿದ್ದು, ಪ್ರಸ್ತುತ ಸರಾಸರಿ ಹಾಲಿನ ಖರೀದಿ ರೂ. 35.30 ಆಗಿರುತ್ತದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಅಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ನಿರ್ಮಾಣಕ್ಕೆ ಕ್ರಮ
ಹೃದಯಾಘಾತಗಳ ಬಗ್ಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು - ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳ ಬಗ್ಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ವ್ಯಾಯಾಮ, ಪ್ರಾಣಾಯಾಮ, ಆಹಾರಪದ್ಧತಿ ಹಾಗೂ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬಗ್ಗೆ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಜನರು ಪ್ರತಿನಿತ್ಯ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಪ್ರಮಾಣ ಶೇ.25ರಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಇದು ತಪ್ಪು ಗ್ರಹಿಕೆ. ವಾಸ್ತವವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶೇ.5ರಿಂದ 6ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದವು. ಈ ವರ್ಷವು ಇಷ್ಟೇ ಪ್ರಮಾಣದಲ್ಲಿ ಇದೆ ಎಂದು ಸಚಿವರು ಹೇಳಿದರು.
ಬದಲಾದ ಜೀವನಶೈಲಿ, ಅಧಿಕ ಒತ್ತಡ, ಬೊಜ್ಜು, ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆ, ಕುಟುಂಬದ ಹಿನ್ನಲೆ ಇತ್ಯಾದಿ ಕಾರಣಗಳಿಂದ ಹೃದಯಘಾತಗಳು ಸಂಭವಿಸಿವೆ. ಯಾವುದೋ ಒಂದು ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಜನತೆ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ಕೋವಿಡ್ ನಂತರ ಹೃದಯಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಗುಮಾನಿಯೂ ಇದೆ. ವಾಸ್ತವವಾಗಿ ಇದಕ್ಕೂ ಅದಕ್ಕೂ ಸಂಬಂಧವೇ ಇಲ್ಲ. ಪ್ರತಿದಿನ ವ್ಯಾಯಾಮ, ಪ್ರಾಣಯಾಮ, ಸರಿಯಾದ ಸಮಯಕ್ಕೆ ನಿದ್ದೆ, ಒತ್ತಡ ಇಲ್ಲದಿರುವುದು, ಖಿನ್ನತೆ ಒಳಗಾಗದೆ ಸಮತೋಲನ ಕಾಯ್ದುಕೊಂಡರೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಸಚಿವರು ಸಲಹೆ ಕೊಟ್ಟರು.
ಈ ಪ್ರಕರಣಗಳ ಕುರಿತಂತೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಕೆ ಎಸ್ ರವೀಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಯಪಡೆಯನ್ನು ಸಹ ರಚಿಸಿತ್ತು. ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಜನರ ಊಹೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಜನರು ಮೊದಲು ವದಂತಿಗಳಿಗೆ ಕಿವಿಗೊಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ :
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಜೊತೆ ಕಡ್ಡಾಯವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಬೇಕೆಂಬುದು ನಮ್ಮ ಸರ್ಕಾರದ ಸಿದ್ದಾಂತವಾಗಿದೆ. ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಈ ಆಸ್ಪತ್ರೆಗಳು ಕಾರ್ಯಾರಂಭ ಮಾಡಿವೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಸ್ಥಾಪನೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚನೆ ಕೊಟ್ಟಿದ್ದಾರೆ. ಈ ನಿಯಮವನ್ನು ನಾವು ಈಗಾಗಲೇ ಅಳವಡಿಸಿಕೊಂಡು ಕಾರ್ಯಾರಂಭ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲೂ ಸೂಪರ್ ಸ್ಪೆಷಾಲಿಟಿ ಜೊತೆಗೆ ಟ್ರಾಮಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.
ಬೆಂಗಳೂರು-ಮೈಸೂರು, ಕಲಬುರಗಿ, ಹುಬ್ಬಳ್ಳಿಯ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿದೆ. ಇದೇ ರೀತಿ ಬಾಗಲಕೋಟೆ, ಯಾದಗಿರಿ, ರಾಯಚೂರಿನಲ್ಲೂ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಾಗುವುದು. ಬೀದರ್, ಕೊಪ್ಪಳ, ಬೆಳಗಾವಿಯಲ್ಲಿ ಎರಡರಿಂದ ಮೂರು ತಿಂಗಳೊಳಗೆ ಈ ಆಸ್ಪತ್ರೆಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಪಾಟೀಲ್ ತಿಳಿಸಿದ್ದಾರೆ.
ನಂಜನಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಆರಂಭಿಸಲು ಕ್ರಮ ವಹಿಸಲಾಗುವುದು – ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ನಂಜನಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಟ್ರಮಾ ಕೇರ್ ಸೇವೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ಯತೀಂದ್ರ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗಳನ್ನು ರಾಷ್ಟ್ರೀಯ ಅಪಘಾತ ಮತ್ತು ಸುಟ್ಟಗಾಯಗಳ ಕಾರ್ಯಕ್ರಮದಡಿಯಲ್ಲಿ ಬಲಗೊಳಿಸಲು ರೂ. 10.00 ಕೋಟಿಗಳ ಕ್ರಿಯಾ ಯೋಜನೆಗೆ ಅನುಮೋದನ ನೀಡಲಾಗಿದೆ.
ದಿನಾಂಕ: 19.03.2025 ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯು ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಇದರಲ್ಲಿ ನಂಜನಗೂಡು ತಾಲ್ಲೂಕು ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಸಹ ಪ್ರಸ್ತಾಪಿಸಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪಘಾತ ಮತ್ತು ಸುಟ್ಟ ಗಾಯಗಳ ತಡೆಗಟ್ಟುವಿಕೆ ಮತ್ತು ನಿರ್ವಹಣಾ ಕಾರ್ಯಕ್ರಮದ ಮಾರ್ಗಸೂಚಿಯನ್ವಯ - ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿನ ತುರ್ತು ಚಿಕಿತ್ಸಾ ವಿಭಾಗವನ್ನು ಮೇಲ್ದರ್ಜೆಗೇರಿಸಿ ಅಪಘಾತಕ್ಕೆ ಒಳಗಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಅವಶ್ಯಕವಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ತುರ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುತ್ತದೆ ಪ್ರತ್ಯೇಕ ಟ್ರಾಮಾ ಕೇರ್ ಸೆಂಟರ್ಗಳನ್ನು ಕಲ್ಪಿಸಬೇಕೆಂಬ ನಿಯಮವು ಮಾರ್ಗಸೂಚಿಯಲ್ಲಿ ಇಲ್ಲದಿರುವುದರಿಂದ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲು ಜಾಗದ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.
ಸಿಂಧನೂರು ತಾಲ್ಲೂಕಿನ ರೈತರಿಗೆ 10 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಪರಿಶೀಲಸಿ ಕ್ರಮ ವಹಿಸಲಾಗುವುದು – ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿನ ಸಿಂದನೂರು ತಾಲ್ಲೂಕಿನ ರೈತರ ಪಂಪ್ ಸೆಟ್ಟುಗಳಿಗೆ ನಿರಂತರವಾಗಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಭತ್ತ ನಾಟಿ ಸಮಯದಲ್ಲಿ 10 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ರೈತರು ಮನವಿ ಸಲ್ಲಿಸಿದಲ್ಲಿ ವಿದ್ಯುತ್ ನಿಗಮದವರೊಂದಿಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿನ ಸಿಂಧನೂರು ತಾಲ್ಲೂಕಿನ ರೈತರ ಪಂಪ್ಸೆಟ್ಟುಗಳಿಗೆ ನಿರಂತರವಾಗಿ 7 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ ಸಿಂಧನೂರು ತಾಲ್ಲೂಕು ವಿದ್ಯುತ್ ಉಪ-ವಿಭಾಗಕ್ಕೆ ಕ್ರೇನ್ ಒದಗಿಸುವ ಪ್ರಸ್ತಾವನೆ ಇದ್ದು, ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದರು.
ಹೃದಯಘಾತಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಮೂಡಿಸಲು ಕ್ರಮ ವಹಿಸಲಾಗಿದೆ – ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹೃದಯಘಾತಗಳ ಬಗ್ಗೆ ಪ್ರಕಟವಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂಬಂಧ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಸಹ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೃದಯಾಘಾತ ಪ್ರಕರಣಗಳು ಅಧಿಸೂಚಿತ ರೋಗ ಎಂದು ಘೋಷಣೆಯಾಗದೆ ಇರುವುದರಿಂದ ಹೃದಯಾಘಾತ ಪ್ರಕರಣಗಳ ನಿಖರವಾದ ಮಾಹಿತಿ ಲಭ್ಯವಿರುವುದಿಲ್ಲ. ಆದರೆ, ಹಠಾತ್ ಹೃದಯಾಘಾತವನ್ನು ತಡೆಯಲು ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಮಾರ್ಚ್ 2023 ರಿಂದ ಪ್ರಾರಂಭಿಸಲಾಗಿರುತ್ತದೆ.
ಕಳೆದ 03 ವರ್ಷಗಳಲ್ಲಿ ಸಂಭವಿಸಿರುವ ಮರಣಗಳು ತೃತೀಯ ಹಂತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಹಂತದಲ್ಲಿ ಮತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈ ಎಲ್ಲಾ ಮರಣಗಳು Spokes & Hub ನೊಂದಾಯಿಸಲ್ಪಟ್ಟಿರುತ್ತವೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಳೆದೆ 3 ವರ್ಷದಲ್ಲಿ ಹೃದಯಾಘಾತ ಸಂಭವಿಸಿರುವ ಪ್ರಕರಣಗಳ ಸಂಖ್ಯೆ 61299 ಇದರಲ್ಲಿ 45 ವರ್ಷಕ್ಕಿಂತ ಕಡಿಮೆ ವಯೆಸ್ಸಿನವರಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 472 ಎಂದು ವೈದಕೀಯ ಶಿಕ್ಷಣ ಇಲಾಖೆಯು ತಿಳಿಸಿದೆ.
ರಾಜ್ಯದ ಯುವ ಸಮುದಾಯದಲ್ಲಿ ತೀವ್ರ ಹೃದಯಾಘಾತದಿಂದ ಮರಣ ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಗ್ಗೆ ಅಧ್ಯಯನ ನಡೆಸಲು ಡಾ|| ಕೆ.ಎಸ್. ರವೀಂದ್ರನಾಥ್, ನಿರ್ದೇಶಕರು, ಶ್ರೀ ಜಯದೇವ ಹೃದ್ರೋಗ ಸಂಸ್ಥೆ, ಬೆಂಗಳೂರು ಇವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಹೃದಯಾಘಾತ / ತೀವ್ರ ಹೃದಯಾಘಾತ ಪ್ರಕರಣಗಳಲ್ಲಿ ಶೇಕಡಾ 75% ಕ್ಕಿಂತ ಹೆಚ್ಚು ಜನರು ಒಂದಕ್ಕಿಂತ ಒಂದಕ್ಕಿಂತ ಹೆಚ್ಚು ಹೃದಯದ ಅಪಾಯಕಾರಿ ಅಂಶವನ್ನು ಹೊಂದಿದ್ದಾರೆ. ಅದರಲ್ಲಿ ಮುಖ್ಯವಾಗಿ ದೈಹಿಕ ಚಟುವಟಿಕೆಯಗಳಲ್ಲಿ ತೊಡಗದೆ ಇರುವುದು (ಜೀವನ ಶೈಲಿ ಬದಲಾವಣೆ), ಅನಾರೋಗ್ಯಕರ ಆಹಾರ ಪದ್ದತಿ, ಮಾನಸಿಕ ಒತ್ತಡ, ಅತಿಯಾದ ದೇಹದ ತೂಕ ಅಥವಾ ಬೊಜ್ಜುತನ, ಅತಿಯಾದ ಮದಪಾನ, ಮಧುಮೇಹ, ಧೂಮಪಾನ, ಅಧಿಕ ರಕ್ತದೊತ್ತಡ, ಕುಟುಂಬದ ಹೃದ್ರೋಗದ ಹಿನ್ನೆಲೆ ಹೊಂದಿರುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ.
ಹೃದಯ ಆರೋಗ್ಯ ಕಣ್ಗಾವಲು ಮೂಲಕ ಆಸ್ಪತ್ರೆಯ ಹೊರಗಿನ ಹಠಾತ್ ಸಾವುಗಳಿಗೆ ಕಡ್ಡಾಯ ಶವ ಪರೀಕ್ಷೆಗಳನ್ನು ನಡೆಸಲು ಕ್ರಮಕೈಗೊಳ್ಳುವುದು. ತ್ವರಿತ ಹೃದಯ ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ECG ಯಂತ್ರಗಳು, CPR ತರಬೇತಿ, ಸಾರ್ವಜನಿಕ ಸ್ಥಳಗಳಲ್ಲಿ AED ಗಳ ಸ್ಥಾಪನೆಗೆ ಕ್ರಮಕೈಗೊಳ್ಳುವುದು.ವಾಹನ ಚಾಲಕರಂತಹ ಅಪಾಯದ ಗುಂಪುಗಳಿಗೆ ಹೃದಯ ಕಾಯಿಲೆ ಬಗ್ಗೆ ಆರೋಗ್ಯ ತಪಾಸಣೆಗಳನ್ನು ಹಾಗೂ ಜನಜಾಗೃತಿ ಅಭಿಯಾನಗಳನ್ನು ಆರಂಭಿಸಲು ಕ್ರಮಕೈಗೊಳ್ಳುವುದು. ಹೃದಯ ಆರೋಗ್ಯದ ಬಗ್ಗೆ ರಾಜ್ಯ ಮಟ್ಟದಲ್ಲಿ ಸಮಗ್ರ ಮತ್ತು ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ಶಿಫಾರಸ್ಸನ್ನು ಮಾಡಿರುತ್ತದೆ.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿನ ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತ ಸಂಭವಿಸಿದಾಗ - ತುರ್ತು ಚಿಕಿತ್ಸೆ ನೀಡಲು ಅಗತ್ಯ ಔಷಧಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ತೀವ್ರ ಹೃದಯಾಘಾತ ಸಂಭವಿಸಿದಾಗ ಕೊರೊನರಿ ಸ್ಟಂಟ್ ಮತ್ತು ಕಾರ್ಡಿಯಕ್ ಬೈಪಾಸ್ ಸರ್ಜರಿಗಳಿಗೆ ಸೂಪರ್ ಸ್ಪೇಷಾಲಿಟಿ ತಜ್ಞರ ಅವಶ್ಯಕತೆ ಇರುವುದರಿಂದ ಸದರಿ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ (SAST) ನೊಂದಣಿ ಹೊಂದಿರುವ ತೃತೀಯ ಹಂತದ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಕ್ರಮವಹಿಸಲಾಗಿರುತ್ತದೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು, ಮೈಸೂರು, ಕಲಬುರ್ಗಿ ಶಾಖೆಗಳಲ್ಲಿ ಹೃದಯಾಘಾತ ಸಂಭವಿಸಿದಾಗ ಕೊರೊನರಿ ಸ್ಟಂಟ್ ಮತ್ತು ಕಾರ್ಡಿಯಾಕ್ ಬೈಪಾಸ್ ಸರ್ಜರಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಹೃದಯ ತ್ತು ಸ್ತಂಭನ ಪ್ರಕರಣಗಳಿಗೆ ಸಾರ್ವಜನಿಕರಲ್ಲಿ ಜಾಗೃತಿ – ಮೂಡಿಸಲು ಗೃಹ ಆರೋಗ್ಯ ಯೋಜನೆ ಮೂಲಕ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ಹೃದಯಾಘಾತಕ್ಕೆ ಕಾರಣವಾದ ಅಪಾಯಕಾರಿ ಅಂಶಗಳನ್ನು ಪತ್ತೆ ಮಾಡಲು 30 ವರ್ಷ ಮೇಲ್ಪಟ್ಟವರಿಗೆ ತಪಾಸಣೆ ಮಾಡಲು ಕ್ರಮವಹಿಸಲಾಗಿರುತ್ತದೆ.
ಡಾ. ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿಸ್ತರಿಸಲು ಕ್ರಮ ವಹಿಸಲಾಗುತ್ತಿದೆ. ಶಾಲೆಗಳಲ್ಲಿ, ಜಿಮ್ಗಳಲ್ಲಿ ಸಂಸ್ಥೆಗಳಲ್ಲಿ, ಸಾರ್ವಜನಿಕರಿಗೆ ಸಿ.ಪಿ.ಆರ್ ತರಬೇತಿ, ಜನಜಾಗೃತಿ ಹಾಗೂ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪರಿಷ್ಕರಣೆ ಕಾರ್ಯ ಮುಗಿದ ಕೂಡಲೆ ಬಿಪಿಎಲ್ ಕಾರ್ಡ್ ವಿತರಿಸಲಾಗುವುದು.
ಪರಿಷ್ಕರಣೆ ಕಾರ್ಯಕ್ಕೆ ಎಲ್ಲಾರ ಸಹಮತ ಅತ್ಯವಶ್ಯಕ ಇದರಲ್ಲಿ ರಾಜಕೀಯ ಮಾಡಬಾರದು - ಆಹಾರ ಸಚಿವ ಕೆಹೆಚ್. ಮುನಿಯಪ್ಪ
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ಕಳೆದ ಸರ್ಕಾರಗಳ ಅವಧಿಯಿಂದಲೂ ಸಹ ಸಾರ್ವಜನಿಕರು ಪಡಿತರ ಚೀಟಿಗಾಗಿ ಸಲ್ಲಿಸಿದ್ದ ಹಲವಾರು ಅರ್ಜಿಗಳು ಪರಿಷ್ಕರಣೆ ಆಗದೆ ಹಾಗೆಯೇ ಉಳಿದಿದ್ದು ಅವುಗಳನ್ನು ನಮ್ಮ ಸರ್ಕಾರ ಬಂದ ಮೇಲೆ ಹಂತ ಹಂತವಾಗಿ ಪರಿಷ್ಕರಣೆ ಮಾಡಲಾಗುತ್ತಿದ್ದು ಪರಿಷ್ಕರಣೆಯು ಅಂತಿಮ ಹಂತದಲ್ಲಿದೆ. ಪರಿಷ್ಕರಣೆ ಕಾರ್ಯ ಮುಗಿದ ತಕ್ಷಣ ಅರ್ಹರಿಗೆ ಹೊಸ ಬಿಪಿಎಲ್ ಪಡಿತರ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಕೆ. ಹಾಗೂ ಡಾ.ಯತೀಂದ್ರ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ರಾಜ್ಯವು ಆರ್ಥಿಕ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ರಾಜ್ಯ ಬಿಟ್ಟರೆ ನಂತರದ ಎರಡನೇ ರಾಜ್ಯವಾಗಿದೆ. ನಾವು ಅಭಿವೃದ್ಧಿ ಹೊಂದಿರುವ ರಾಜ್ಯವಾಗಿದ್ದು, ನಮ್ಮ ರಾಜ್ಯದಲ್ಲಿ ಶೇ 75% ರಿಂದ 80 ರಷ್ಟು ಜನರು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ.
ಕಳೆದ ಅವಧಿಯಲ್ಲಿ ನಾನು ಪರಿಷ್ಕರಣೆ ಕಾರ್ಯದ ಹಂತದಲ್ಲಿ ಸುಮಾರು 15 ಲಕ್ಷ ಕಾರ್ಡ್ಗಳನ್ನು ಗುರುತಿಸಿದ್ದಾಗ ನಮ್ಮೆಲ್ಲಾ ಸದಸ್ಯರು ವಿರೋಧಿಸಿದ ಕಾರಣ ಈ ಕಾರ್ಯವನ್ನು ಕೈ ಬಿಡಲಾಯಿತು ಇದರಲ್ಲಿ ರಾಜಕೀಯ ಬೆರೆಸದೆ ಅರ್ಹರಿಗೆ ಮಾತ್ರ ನಾವು ಈ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸಬೇಕು ಎಂದರು.
ಪರಿಷ್ಕರಣೆ ಕಾರ್ಯ ಮುಗಿದ ತಕ್ಷಣ ಹೊಸ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ನಮ್ಮ ಸರ್ಕಾರ ಜನಪರವಾಗಿದ್ದು ಅರ್ಹ ಫಲಾನುಭವಿಗಳಿಗೆ ನಾವು ಕಾರ್ಡ್ ಗಳ ವಿತರಣೆ ಮಾಡುವ ಕುರಿತು ಕ್ರಮವಹಿಸಲಾಗುವುದು ಎಂದರು.
ವನ್ಯಜೀವಿ ಸಂಘರ್ಷದಿಂದ ಮೃತಪಟ್ಟವರಿಗೆ ಸಮಾನ ಪರಿಹಾರ- ಸಚಿವ ಈಶ್ವರ ಖಂಡ್ರೆ
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ವನ್ಯಜೀವಿ ಸಂಘರ್ಷದಿಂದ ಮೃತಪಟ್ಟ ಕುಟುಂಬಗಳಿಗೆ ಸಮಾನ ಪರಿಹಾರ ನೀಡಲಾಗುತ್ತಿದೆ ಎಂದು ಅರಣ್ಯ. ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ 310 ಅರಣ್ಯ ವೀಕ್ಷಕರ ನೇಮಕಾತಿ ಮಾಡಲಾಗಿದ್ದು, ಈಗ 540 ಅರಣ್ಯ ರಕ್ಷಕರ (ಗಾರ್ಡ್) ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕಾಡಾನೆ ದಾಳಿ, ಹುಲಿ ದಾಳಿ ಸೇರಿದಂತೆ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ಪ್ರಸ್ತುತ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯ ವತಿಯಿಂದ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಆನೆ ಕಾರ್ಯಪಡೆಯನ್ನು ಮಂಜೂರು ಮಾಡಲು ಸೂಚಿಸಲಾಗಿದ್ದು, 2-3 ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ಪಡೆಯಲ್ಲಿ 32 ಸಿಬ್ಬಂದಿ ಇರುತ್ತಾರೆ. ಅವರು ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದ ಜೊತೆಗೆ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲೂ ಸಹಕರಿಸಲಿದ್ದಾರೆ ಎಂದರು.
ಆನೆಪಥ (ಕಾರಿಡಾರ್) ಮತ್ತು ಆವಾಸಸ್ಥಾನ ಸಂರಕ್ಷಣೆಗಾಗಿ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಮಂದಿರ (ಐಐಎಸ್.ಸಿ)ಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರೊ. ಆರ್.ಸುಕುಮಾರ್ ಅವರ ತಂಡ ಅಧ್ಯಯನ ಆರಂಭಿಸಿದೆ ಎಂದು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿ. ಈಗಾಗಲೇ ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ. ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವಲ್ಲಿ ವಿಫಲರಾದ ಉಪ ವಲಯ ಅರಣ್ಯಾಧಿಕಾರಿ ಸೇರಿ ಅಧಿಕಾರಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.
ಆನೆ-ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ರಾಮನಗರ ಜಿಲ್ಲೆಯ ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿದೆ ಎಂದರು. ಆನೆ ಶಿಬಿರ ನಿರ್ಮಾಣ ಮಾಡಲು ಹಲವು ಕಡೆಗಳಿಂದ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಮಂಗಗಳ ಹಾವಳಿಯಿಂದ ಬೆಳೆ ಹಾನಿ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಮಂಗಳನ್ನು ಹಿಡಿಯಲು ಸೂಚನೆ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಆಸ್ಪತ್ರಗಳಲ್ಲಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲು ಕ್ರಮ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ರಾಜ್ಯದ 31 ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಪ್ರಮುಖ ಆಸ್ಪತ್ರೆಗಳಲ್ಲಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 147 ತಾಲ್ಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಂತ್ರಣದಲ್ಲಿ 12 ಜಿಲ್ಲಾಸ್ಪತ್ರೆ ಹಾಗೂ ಬೆಂಗಳೂರು ನಗರದ 03 ಪ್ರಮುಖ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಾಳುಗಳು, ಅನಾರೋಗ್ಯದವರು ಹಾಗೂ ಅಂಗವಿಕಲರಿಗೆ ಜಿಲ್ಲಾಸ್ಪತ್ರೆಗಳಲ್ಲಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲಾಗುತ್ತಿದೆ. ಎಲೆಕ್ಟೋಥೆರಪಿ, ಇಂಟರ್ಫರೆನ್ಷಿಯಲ್ ಥೆರಪಿ (IFT), ಅಲ್ವಾಸೌಂಡ್ ಥೆರಪಿ, ಟ್ರಾನ್ಸ್ಟುಟೇನಿಯಸ್ ಎಲೆಕ್ಟಿಕಲ್ ನರ್ವ ಸ್ವಿಮ್ಯುಲೇಶನ್ (TENS), ಟ್ರಾಕ್ಶನ್, ಸ್ಟಿಮುಲೇಷನ್, ಶಾರ್ಟ್ವೇವ್ ಡಯಾಥರ್ಮಿ (SWD) ಸೇವೆಗಳನ್ನು ಒದಗಿಸಲಾಗುತ್ತಿದೆ.
ಎಲ್ಲಾ ಜಿಲ್ಲೆಗಳಲ್ಲಿನ ಆಸ್ಪತ್ರೆಯ ಫಿಜಿಯೋಥೆರಪಿ ಕೇಂದ್ರಗಳಲ್ಲಿ ಮಾಸಿಕವಾಗಿ 1400 ರಿಂದ 1500 ರವರೆಗೆ ರೋಗಿಗಳಿಗೆ ಸೇವೆಯನ್ನು ನೀಡಲಾಗುತ್ತಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿಯಲ್ಲಿ, 2024-25 ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 1,33,182 ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯ ಫಿಜಿಯೋಥೆರಪಿ ಕೇಂದ್ರಗಳಲ್ಲಿ ಸೇವೆಯನ್ನು ಒದಗಿಸಲಾಗಿರುತ್ತದೆ ಹಾಗೂ ಒಟ್ಟು 2,34,631 ರೋಗಿಗಳಿಗೆ ಮನೆ ಭೇಟಿ ನೀಡಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲಾಗಿದೆ.
2025-26ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಾಜ್ಯದಲ್ಲಿ ಒಟ್ಟು 30,386 ರೋಗಿಗಳಿಗೆ ಜಿಲ್ಲಾಸ್ಪತ್ರೆಯ ಫಿಜಿಯೋಥೆರಪಿ ಕೇಂದ್ರಗಳಲ್ಲಿ ಸೇವೆಯನ್ನು ಒದಗಿಸಲಾಗಿರುತ್ತದೆ ಹಾಗೂ ಒಟ್ಟು 39,944 ರೋಗಿಗಳಿಗೆ ಮನೆ ಭೇಟಿ ನೀಡಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲಾಗಿದೆ.
ರಾಜ್ಯದ ಎಲ್ಲಾ 31 ಜಿಲ್ಲಾ ಆಸ್ಪತ್ರೆಗಳ ಫಿಜಿಯೋಥೆರಪಿ ಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ (NP-NCD) ಅಡಿಯಲ್ಲಿ ಒಬ್ಬರು ಫಿಜಿಯೋಥೆರಪಿಸ್ಟ್ ರವರನ್ನು ಹಾಗೂ ರಾಷ್ಟ್ರೀಯ ಹಿರಿಯರ ನಾಗರೀಕರ ಆರೋಗ್ಯ ಆರೈಕೆ ಕಾರ್ಯಕ್ರಮ (NPHCE) ಅಡಿಯಲ್ಲಿ 15 ಜಿಲ್ಲಾಸ್ಪತ್ರೆಗಳಿಗೆ ಒಬ್ಬರು ಫಿಜಿಯೋಥೆರಪಿಸ್ಟ್ ರವರನ್ನು NHM ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿರುವ ಫಿಜಿಯೋಥೆರಪಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಯಲ್ಲಾಪುರದ ಕಾಳಮ್ಮ ನಗರದಲ್ಲಿರುವ ಪರಿಶಿಷ್ಟ ಪಂಗಡದ ಹಾಗೂ ಇತರೆ ಸಮುದಾಯಗಳ ಮನೆಗಳಿಗೆ ವಿದ್ಯುತ್ ಒದಗಿಸಲು ಕ್ರಮ ವಹಿಸಲಾಗುವುದು – ಇಂದನ ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ) :
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಯಲ್ಲಾಪುರದ ಕಾಳಮ್ಮ ನಗರದಲ್ಲಿರುವ ಪರಿಶಿಷ್ಟ ಪಂಗಡದ ಮತ್ತು ಇತರೆ ಸಮುದಾಯಗಳ ಕೆಲವು ಕಚ್ಚಾ ಮನೆಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗುವುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೂ ದಾಖಲಾತಿಗಳನ್ನು ಪಡೆದು ಕೂಡಲೇ ವಿದ್ಯುತ್ ಸಂಪರ್ಕ ನೀಡುವಂತೆ ಸೂಚನೆ ನೀಡಲಾಗುವುದು ಎಂದು ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಯಲ್ಲಾಪುರದ ಕಾಳಮ್ಮ ನಗರದಲ್ಲಿರುವ ಪರಿಶಿಷ್ಟ ಪಂಗಡದ ಮತ್ತು ಇತರೆ ಸಮುದಾಯಗಳ ಕೆಲವು ಕಚ್ಚಾ ಮನೆಗಳಿಗೆ (ಕಚ್ಚಾ ಮನೆ) ವಿದ್ಯುತ್ ಸಂಪರ್ಕ ನೀಡುವಂತೆ ಮನವಿಗಳು ಸ್ವೀಕೃತಗೊಂಡಿರುತ್ತವೆ. ಆದರೆ, ವಿದ್ಯುತ್ ಸಂಪರ್ಕ ನೀಡಲು KERC ನಿಯಮದಂತೆ ಅಗತ್ಯವಿರುವ ದಾಖಲಾತಿಗಳಾದ ವಾರಸುದಾರಿಕೆ ರುಜುವಾತು/ ಮಾಲೀಕತ್ವದ ಪುರಾವೆ/ ಅನುಭವದ ರುಜುವಾತು/ ಸ್ಥಳೀಯ ಪ್ರಾಧಿಕಾರದ ಅನುಮತಿ ಪತ್ರ ಒದಗಿಸಿರದ ಕಾರಣ ಅರ್ಜಿ ನೊಂದಾವಣೆಗೊಂಡಿರುವುದಿಲ್ಲ. ಇದಲ್ಲದೇ, ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ಜಮೀನಿನ ವಾರಸುದಾರರೆಂದು ಹೇಳಿಕೊಂಡಿರುವವರು ಮನವಿ ಸಲ್ಲಿಸಿರುತ್ತಾರೆ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ದಾಖಲೆಗಳನ್ನು ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಬಂಧಿಸಿದವರಿಗೆ ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರವೇಶಾತಿ ಸಮಯದಲ್ಲಿ ಹೆಚ್ಚುವರಿ ಶುಲ್ಕ ವಸೂಲಾತಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ – ಸಚಿವ ಡಾ.ಎಂ.ಸಿ. ಸುಧಾಕರ್
ಬೆಂಗಳೂರು, ಆಗಸ್ಟ್ 18, (ಕರ್ನಾಟಕ ವಾರ್ತೆ):
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಶುಲ್ಕ ಪಾವತಿ ಮಾಡಿದ ನಂತರ ಪ್ರವೇಶಾತಿ ಸಂರ್ಭದಲ್ಲಿ ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚುವರಿ ಶುಲ್ಕ ವಸೂಲಾತಿ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಶುಲ್ಕ ಪಾವತಿ ಮಾಡಿದ ನಂತರ ಪ್ರವೇಶಾತಿ ಸಂರ್ಭದಲ್ಲಿ ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಯೂನಿವರ್ಸಿಟಿ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸುತ್ತಿರುವುದಾಗಿ ಇಬ್ಬರು ಅಭ್ಯರ್ಥಿಗಳು ವಿಶ್ವವಿದ್ಯಾಲಯಗಳ ವಿರುದ್ಧ ಹಿಂದಿನ ಶೈಕ್ಷಣಿಕ ಸಾಲುಗಳಲ್ಲಿ, ಅಧ್ಯಕ್ಷರು, ಶುಲ್ಕ ನಿಯಂತ್ರಣ ಸಮಿತಿ ಇವರಿಗೆ CMR University, Hennur, Bagalur Main Road, Bangalore, ಮತ್ತು Sharanabasava University, Kalaburgi ವಿರುದ್ದ ದೂರನ್ನು ಸಲ್ಲಿಸಿದ್ದರು. ಈ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ, ಹೆಚ್ಚುವರಿಯಾಗಿ ಪಾವತಿಸಿರುವ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರುಪಾವತಿಸಲು/ಮುಂದಿನ ಸಾಲಿಗೆ ಮರು ಹೊಂದಾಣಿಕೆ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ.
ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನೊಂದಣಿ ಶುಲ್ಕವಾಗಿ ರೂ.10,610/-ನ್ನು ನಿಗಧಿಪಡಿಸಿರುತ್ತದೆ. ಸರ್ಕಾರದಿಂದ ನಿಗಧಿಪಡಿಸಿರುವ ನಿಗಧಿಪಡಿಸಿರುವ ಬೋಧನಾ ಶುಲ್ಕ. ಅಭಿವೃದ್ಧಿ ಶುಲ್ಕ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ನೊಂದಣಿ ಶುಲ್ಕವನ್ನು ಒಳಗೊಂಡಂತೆ ವಿಶ್ವವಿದ್ಯಾಲಯವಾರು ಖಾಸಗಿ ವಿಶ್ವವಿದ್ಯಾಲಯಗಳ ಸರ್ಕಾರಿ ಕೋಟಾದ ಶೇ.40 ರಷ್ಟು ಸೀಟುಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪಾವತಿಸಬೇಕಾಗಿರುತ್ತದೆ.
CET ಮುಂದುವರಿದು, ಹೆಚ್ಚುವರಿ ಶುಲ್ಕದ ವಸೂಲಾತಿ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮೂಲಕ ಆಯ್ಕೆಯಾಗಿ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ನಿಗಧಿಪಡಿಸುವ ಶುಲ್ಕದ ವಿವರಗಳನ್ನು ವಿಶ್ವವಿದ್ಯಾಲಯದ (Website) ಅಪ್ಲೋಡ್ ಮಾಡಲು ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳು ಕುಲಸಚಿವರಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನಿಂದ ದಿನಾಂಕ: :04.08.2025 ರಲ್ಲಿ ಸುತ್ತೋಲೆ ಮೂಲಕ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.