ಕೃತಿಪರಿಚಯ (ಕೃಪೆ - ಪ್ರಜಾವಾಣಿ): ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ 1922ರಲ್ಲಿ ಪ್ರಕಟಿಸಿದ ಅನನ್ಯ ಕೃತಿ ಡಿ.ವಿ. ಗುಂಡಪ್ಪನವರ "ವಸಂತ ಕುಸುಮಾಂಜಲಿ" ಕವನ ಸಂಕಲನ. ಸಂಘದ ಅಧ್ಯಕ್ಷರಾದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಈ ಕೃತಿಯನ್ನು ಪ್ರಕಟಪಡಿಸಿರುವುದರ ಜೊತೆಗೆ ಮುನ್ನುಡಿಯನ್ನೂ ಬರೆದಿದ್ದಾರೆ. | |||
52 ಪುಟಗಳ ಅಷ್ಟಕಿರೀಟಾಕಾರದ ಈ. ಪುಟ್ಟ ಕವನ ಸಂಕಲನ ಇದೇ ಲೇಖಕರ "ನಿವೇದನ" ಕೃತಿಗಿಂತ ಎರಡು ವರ್ಷ ಮೊದಲು ಮುದ್ರಣಗೊಂಡಿದೆ. ಈ ಸಂಕಲನದ ಮೊದಲ ಐದು ಪದ್ಯಗಳು 1911ರ ಹೊತ್ತಿಗೇ ಮುದ್ರಿತವಾಗಿದ್ದವು. | |||
"ವಸಂತ ಕುಸುಮಾಂಜಲಿ" ಪ್ರಕಟಣೆಯ ಬಗ್ಗೆ ಡಿ.ವಿ.ಜಿ. ಅವರಿಗಿದ್ದ ಅಳುಕು ಗ್ರಂಥಾರಂಭದ ವಿಜ್ಞಾಪನೆಯಲ್ಲಿ ಸ್ಪಷ್ಟವಾಗಿದೆ. ಈ ಬಗೆಯ ಸಂಶಯವು ಬಲವಾಗಿದ್ದರೂ ಕನ್ನಡಿಗರಿಗೆ ಪರಮ ಗೌರವಾರ್ಹರಾದ ಮ ಬೆಳ್ಳಾವೆಯ ವೆಂಕಟನಾರಾಯಣಪ್ಪನವರೂ ಮ ತಳುಕಿನ ವೆಂಕಣ್ಣಯ್ಯನವರೂ, ಹಾಗೆಯೇ ಈ ಪದ್ಯಗಳನ್ನು ಆಗಾಗ ಓದಿದ್ದ ಅಥವಾ ಕೇಳಿದ್ದ ಕಾವ್ಯಜ್ಞರಾದ ಇತರ ಕೆಲ ಮಿತ್ರರೂ ಈ ಪದ್ಯಸಮುಚ್ಛಯವು ಪ್ರಕಟನೆಗೆ | |||
ಅರ್ಹವಾಗಿದೆಯೆಂದು ಲೇಖಕನಿಗೆ ಭರವಸೆ ಹೇಳಿ, ಇದು ಪ್ರಕಟವಾಗಲೇಬೇಕೆಂದು ನಿಶ್ಚಯಿಸಿದರು. | |||
ತೋಟದಲ್ಲಿ ಎತ್ತರವಾದ ಮರಗಳೂ ಬಹುದೂರ ಹಬ್ಬಿರುವ ಬಳ್ಳಿಗಳೂ ಇದ್ದರೂ ನೆಲವನ್ನೇ ಅವಲಂಬಿಸಿಕೊಂಡಿರುವ ಬಡ ಹುಲ್ಲೂ ಇರುವಂತೆ ಸಾಹಿತ್ಯವನದಲ್ಲಿ ಮಹಾಕಾವ್ಯಗಳೂ ಉದ್ದಾಮ ಗ್ರಂಥಗಳೂ ಇದ್ದರೂ ಇಂತಹ ಅಲ್ಪಕೃತಿಗಳೂ ಇರಬಹುದಲ್ಲವೆ? ಎಂದು ಡಿ.ವಿ.ಜಿ. ಹೇಳಿದ್ದಾರೆ. | |||
ತಮ್ಮ ಭಾಷಾ ರಚನೆಯ ವಿನ್ಯಾಸಗಳು ಕವಿತೆಗಳಲ್ಲವೇನೋ ಎಂಬ ಸಂಶಯ ಡಿ.ವಿ.ಜಿ. ಅವರಿಗೆ ಯಾವಾಗಲೂ ಇದ್ದೇ ಇತ್ತು. ಒಂದು ಪತ್ರದಲ್ಲಿ ಅವರು, "ಕನ್ನಡ ಸಾಹಿತ್ಯದಲ್ಲಿ ನಾನು ಮಾಡಿರುವುದು ತೇಪೆ ಹಾಕುವ ಕೆಲಸ" ಎಂದು ಬರೆದಿದ್ದಾರೆ. ಇದರ ಜೊತೆಗೆ, `ಉತ್ತಮ ಕವಿತ್ವಕ್ಕಿರಬೇಕಾದ ಲಕ್ಷಣಗಳು ಅವುಗಳಲ್ಲಿಲ್ಲದೆ ಇರಬಹುದು; ಅವಿದ್ವತ್ಕವಿತೆಯ ದೋಷಗಳು ಹೇರಳವಾಗಿರಬಹುದು~ ಎಂದೂ ಸಂದೇಹಿಸಿದ್ದಾರೆ. | |||
ಇದು ಅವರ ವಿನಮ್ರತೆಗೆ ಉದಾಹರಣೆಯಷ್ಟೇ. ಈ ಸಂದರ್ಭದಲ್ಲಿ, ಕುವೆಂಪು ಅವರು ತಮ್ಮ "ಆಧುನಿಕ ಕನ್ನಡ ವಾಙ್ಮಯ" ಎಂಬ ಲೇಖನದಲ್ಲಿ ಡಿ.ವಿ.ಜಿ. ಅವರ ಕಾವ್ಯವನ್ನು ಕುರಿತು ಕನ್ನಡ ಕಬ್ಬವೆಣ್ಣು ಸನಾತನ ಮತ್ತು ನೂತನಗಳ ಮಧ್ಯೆ ಹೊಸ್ತಿಲ ಮೇಲೆ ನಿಂತಂತಿದೆ. ಅನೇಕ ಪದ್ಯಗಳು ವೃತ್ತಕಂದ ರೂಪವಾಗಿವೆ. | |||
ಆತ್ಮವು ನೂತನವಾದರೂ ವೇಷವು ಪುರಾತನವಾದುದು ಎಂದು ಹೇಳುವ ಮಾತುಗಳನ್ನು ಗಮನಿಸಬಹುದು.ಬೆಳ್ಳಾವೆ ವೆಂಕಟನಾರಾಯಣಪ್ಪನವರು 'ವಸಂತ ಕುಸುಮಾಂಜಲಿ'ಗೆ ಬರೆದ ಮುನ್ನುಡಿಯಲ್ಲಿ- ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವನ ತತ್ವಾಲೋಚನೆಯೂ ಎರಡನೆಯದರಲ್ಲಿ ಆಧುನಿಕ ಭಾರತೀಯ ಮಹಾಪುರುಷ ವಿಷಯಕವಾದ ಕವಿತೆಗಳೂ ಇವೆ. | |||
ಮೊದಲನೆಯ ಭಾಗವು ಉತ್ತಮವಾದ ಜೀವನಕ್ರಮದ ಸ್ವರೂಪವನ್ನು ತೋರಿಸುತ್ತದೆ. ಲೋಕಸೇವೆಯೇ ಮಾನವನ ಪರಮಧರ್ಮವೆಂಬ ನೀತಿಯು ಅದರಲ್ಲಿ ಪ್ರತಿಪಾದಿತವಾಗಿದೆ. ಈ ನೀತಿಯನ್ನು ನಡೆವಳಿಕೆಯಲ್ಲಿ ತೋರಿಸಿರುವ ಆಧುನಿಕ ಭಾರತೀಯ ಮಹಾಪುರುಷರ ಗುಣವಿಶೇಷಗಳು ದ್ವಿತೀಯ ಭಾಗದಲ್ಲಿ ಸೂಚಿತವಾಗಿವೆ ಎಂದು ವಿವರಿಸಿದ್ದಾರೆ. | |||
ವ್ಹಿಟ್ಟಿಯರ್ ಕವಿ, ಶ್ರೀ ರಾಮಕೃಷ್ಣ ಪರಮಹಂಸರು, ರಾಜಾರಾಮ ಮೋಹನರಾಯರು, ದಾದಾಭಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ವಿವೇಕಾನಂದ, ಬಾಲಗಂಗಾಧರ ತಿಲಕರು, ಕವಿ ರವೀಂದ್ರರು, ವಿಜ್ಞಾನಿ ಜಗದೀಶ ಚಂದ್ರ ಬೋಸ್, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು, ಮಹಾತ್ಮ ಗಾಂಧಿ ಮತ್ತು ಮಹಾರಾಜ ಶ್ರೀಕೃಷ್ಣರಾಜೇಂದ್ರ ಒಡೆಯರ್ ಅವರುಗಳ ಚಿತ್ರಗಳ ಜೊತೆಗೆ ದಾದಾಭಾಯಿ ನವರೋಜಿಯವರ ಹಸ್ತಾಕ್ಷರದ ಚಿತ್ರವನ್ನೂ ನೀಡಿರುವುದು `ವಸಂತ ಕುಸುಮಾಂಜಲಿ~ ಸಂಕಲನದ ಒಂದು ವಿಶೇಷ. | |||
`ವಸಂತ ಕುಸುಮಾಂಜಲಿ~ಯಲ್ಲಿ ಕಂದ ಪದ್ಯ, ಹಲವು ಬಗೆಯ ವೃತ್ತಗಳು, ಷಟ್ಪದಿಗಳು ಹಾಗೂ ಸೀಸಪದ್ಯಗಳಿವೆ. ಅದರಲ್ಲಿಯೂ ಸೀಸಪದ್ಯಗಳನ್ನು ವಿಶೇಷವಾಗಿ ಬಳಸಲಾಗಿದೆ. ಸೀಸಪದ್ಯ ಇಂಗ್ಲಿಷಿನ ಸಾನೆಟ್‌ಗೆ ಹತ್ತಿರವಾದ ಛಂದೋರೂಪ. ಸಾನೆಟ್ ಹದಿನಾಲ್ಕು ಸಾಲಿನ ಪದ್ಯವಾದರೆ ಸೀಸಪದ್ಯ 12 ಸಾಲಿನ ಪದ್ಯದ ಕಟ್ಟು ಮತ್ತು ಇದು ಶುದ್ಧ ದ್ರಾವಿಡ ಛಂದೋರೂಪ. ಇದರಲ್ಲಿ ಒಂದು ಅಷ್ಟಪದಿಯೂ ಮತ್ತು ಒಂದು ಚೌಪದಿಯೂ ಇರುತ್ತದೆ. ಸಾನೆಟ್ ಕನ್ನಡದಲ್ಲಿ ಅಷ್ಟು ಹೊತ್ತಿಗಾಗಲೇ (1916) ಗೋವಿಂದ ಪೈ ಅವರ `ಕವಿತಾವತಾರ~ದ ಮೂಲಕ ಅವತಾರವಾಗಿಬಿಟ್ಟಿತ್ತು. | |||
ಈ ಸಂಕಲನದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವಗೀತೆ, ಆತ್ಮಗೀತೆ, ಸರ್ವಮತ ಸಿದ್ಧಾಂತ, ದೇವರೆಲ್ಲಿ?, ಮತ್ತು ಬೇಡಿಕೆ ಎಂಬ ಐದು ಪದ್ಯಗಳಿವೆ. ಜೀವಗೀತೆಯು ವ್ಹಿಟ್ಟಿಯರ್ ಕವಿಯ `ಮೈ ಸೋಲ್ ಅಂಡ್ ಐ~ ಎಂಬ ಕವಿತೆಯ ಅನುವಾದ. ಆತ್ಮಗೀತೆಯು ವಾಲ್ಟ್ ವ್ಹಿಟ್‌ಮನ್ನನ `ಸಾಂಗ್ ಆಫ್ ಮೈ-ಸೆಲ್ಫ್~ ಎಂಬ ಕವಿತೆಯ ಅನುವಾದ. | |||
ಎರಡನೆಯ ಭಾಗದಲ್ಲಿ ಆ ಕಾಲಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಹಿರಿಯ ಚೇತನಗಳಾದ ರಾಮಕೃಷ್ಣ ಪರಮಹಂಸ, ಗಾಂಧಿ, ಜಗದೀಶ್‌ಚಂದ್ರ ಬೋಸ್, ಟ್ಯಾಗೋರ್ ಮುಂತಾದ ಮಹಾಪುರುಷರನ್ನು ಕುರಿತ ವ್ಯಕ್ತಿಚಿತ್ರ ಗೀತಗಳಿವೆ. | |||