ಜ್ಞಾಪಕ, ವಿಜ್ಞಾಪನೆ ಮತ್ತು ಮುನ್ನುಡಿ - ನಿವೇದನ - ಡಿವಿಜಿ
7 views
Skip to first unread message
Today's Kagga
unread,
Feb 8, 2024, 7:55:05 PM2/8/24
Reply to author
Sign in to reply to author
Forward
Sign in to forward
Delete
You do not have permission to delete messages in this group
Copy link
Report message
Show original message
Either email addresses are anonymous for this group or you need the view member email addresses permission to view the original message
to today...@googlegroups.com
ಜ್ಞಾಪಕ:
“ನಿವೇದನ” ಪುಸ್ತಕವು ಮೊದಲ ಸಾರಿ ಪ್ರಕಟವಾದದ್ದು ೧೯೨೪ನೆಯ ಇಸ್ವಿ ಏಪ್ರಿಲ್ ತಿಂಗಳಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ.
ಆಗ ಅದರ ಪೀಠಿಕೆಯಲ್ಲಿ ಹೀಗೆ ಹೇಳಿತ್ತು:
“ತನ್ನ ದೇಶದಲ್ಲಿ ಪ್ರಕೃತಿ ನಿರ್ಮಿತಗಳಾಗಿಯೂ ಮನುಷ್ಯ ನಿರ್ಮಿತಗಳಾಗಿಯೂ ಖ್ಯಾತಿಗೊಂಡಿರುವ ದೃಶ್ಯ ವಿಶೇಷಗಳನ್ನು ಲೇಖಕನು ಮೊಟ್ಟ ಮೊದಲು ನೋಡಿದಾಗ ತನಗಾದ ಅನುಭವವು ಮರಳಿ ಆಗಾಗ ತನ್ನ ನೆನಪಿಗೆ ದೊರೆಯಲಾಗುವಂತೆ ಅದನ್ನು ಮಾತುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಮಾಡಿದ ಪ್ರಯತ್ನದ ಫಲವೇ ಈ ಪುಸ್ತಕದ ಪದ್ಯಗಳು.”... “ಬೇಲೂರಿನ ವಿಗ್ರಹಗಳು ಕೀಟ್ಸ್ (Keats) ಎಂಬ ಇಂಗ್ಲಿಷ್ ಕವಿಯ Ode on a Grecian Urn ಎಂಬ ಕಾವ್ಯದಲ್ಲಿಯ ಸೌಂದರ್ಯ ಪ್ರಶಂಸೆಯನ್ನು ಜ್ಞಾಪಕಕ್ಕೆ ತಂದವು. ಇಲ್ಲಿಯ ಒಂದೆರಡು ಪಂಕ್ತಿಗಳು ಆ ಮಹಾಕವಿಯ ಪ್ರಸಾದವಾಗಿವೆ”.
ಈ ಸಾರಿಯೂ ಕರ್ಣಾಟಕ ಸಂಘವು ಕೆಲವು ಚಿತ್ರಪಟಗಳ ಪಡಿಯಚ್ಚುಗಳನ್ನು ಕೊಟ್ಟು ಉಪಕರಿಸಿದೆ.
ಶ್ರೀಮುಖ ಕ್ರಿ. ೧೯೩೩ ಡಿ.ವಿ.ಜಿ.
ವಿಜ್ಞಾಪನೆ:
ಈ ಪುಸ್ತಕಕ್ಕೆ ಇಂದಿನ ಪುನರ್ಮುದ್ರಣಯೋಗ ಬಂದಿರುವುದು ಬಹುಮಟ್ಟಿಗೆ ಮೈಸೂರು ವಿಶ್ವವಿದ್ಯಾಲಯದ ಕೃಪೆಯಿಂದ. ಆ ವಿದ್ಯಾಪೀಠದ ಅಧಿಕಾರಿಗಳು ಇದನ್ನು ೧೯೫೮ರ ಇಂಟರ್‍ಮೀಡಿಯೆಟ್ ಪರೀಕ್ಷೆಗೆ ಪಠ್ಯಗ್ರಂಥವನ್ನಾಗಿರಿಸಿದ್ದಾರೆ. ಈ ಉಪಕಾರಕ್ಕಾಗಿ ಅವರಿಗೆ ಲೇಖಕನ ಹೃದಯದಿಂದ ವಂದನೆ.
ಇದರಲ್ಲಿಯ ಪದ್ಯಗಳು ಈಗ್ಗೆ ಮೂವತ್ತುಮೂರು ವರ್ಷಗಳಷ್ಟು, –ಇನ್ನೂ ಹೆಚ್ಚು, –ಹಳೆಯವು. ಈ ಕಾಲಧಾವಿತದಲ್ಲಿ ಭೂಮುಖ ಬಹುಮಟ್ಟಿಗೆ ಬದಲಾಯಿಸಿದೆ. ೧೯೨೩ರ ಕಣ್ಣಿಗೆ ಕಾಣಿಸಿದ್ದು ೧೯೫೬ರ ಕಣ್ಣಿಗೆ ಕಾಣಬಂದೀತೋ, ಬಾರದೋ! ಪ್ರಕೃತಿಯ ಪ್ರೇಕ್ಷಣೀಯ ಕ್ಷೇತ್ರಗಳಲ್ಲಿ ಉಳಿದು ನಿಲ್ಲದೆ ಇಮಿರಿಹೋಗಬಹುದಾದ ಸೌಂದರ್ಯಾಂಶವನ್ನು ಬಹುದಿನದ ಪುನರ್ದರ್ಶನಕ್ಕಾಗಿ ಹಿಡಿದಿರಿಸುವ ಸಾಧನ (ಫೊಟೋ) ಛಾಯಾಗ್ರಹಣ ಯಂತ್ರಕಲೆಯದು. ಅಂಥ ಸೌಂದರ್ಯದರ್ಶನದಿಂದ ಮನಸ್ಸಿಗಾದ ಒಂದು ಕ್ಷಣದ ಅನುಭವವನ್ನು ಸ್ಥಿರರೂಪದಲ್ಲಿ ಹಿಡಿದಿರಿಸುವ ಪ್ರಯತ್ನ ಕವನ ಕಲೆಯದು. ಪದ್ಯದಲ್ಲಿ ಹುದುಗಿಸಿದ ಭಾವವನ್ನು ಮತ್ತಷ್ಟು ವಿಶದಪಡಿಸಲು ಅದನ್ನು ಪ್ರೇರಿಸಿದ ಕ್ಷೇತ್ರದ ಪ್ರತ್ಯಕ್ಷ ದರ್ಶನ ಸಹಾಯವಾಗುತ್ತದೆ. ಆ ಕ್ಷೇತ್ರಗಳ ಮೇಲ್ಗುರುತುಗಳು ಕೆಲವು ಬದಲಾಯಿಸಿದ್ದರೂ ಹೆಗ್ಗುರುತುಗಳು ಕೆಲವಾದರೂ ಉಳಿದುಕೊಂಡಿರುತ್ತವೆ. ಇವು ಪುನರನುಭವಕ್ಕೆ ಸ್ಫೂರ್ತಿಕಾರಣಗಳಾಗುತ್ತವೆ. ಆದದ್ದರಿಂದ ಕುತೂಹಲಿಗಳಾದ ವಾಚಕ ಮಿತ್ರರು ಪ್ರಸಕ್ತ ಕ್ಷೇತ್ರಗಳಿಗೆ ಹೋಗಿ ಕಣ್ಣಾರ ನೋಡಬೇಕೆಂಬುದು ಲೇಖಕನ ಬೇಡಿಕೆ. ಅವೇನೂ ದೂರದೇಶಗಳಲ್ಲ,
ಇನ್ನೊಂದು ಮಾತು: ಬೇಲೂರಿನ ಶಿಲ್ಪ ಬೈಭವವನ್ನು ಕುರಿತು ಇಲ್ಲಿರುವ ಪದ್ಯಾವಳಿಯ ಜೊತೆಗೆ ನೋಡಬಹುದಾದ ಇನ್ನೊಂದು ಪ್ರಬಂಧ–ಅದೇ ವಸ್ತುವನ್ನು ಕುರಿತದ್ದು– “ಶ್ರೀ ಚೆನ್ನಕೇಶವ ಅನ್ತಃಪುರ ಗೀತೆ” (೧೯೫೦). ಸೌಂದರ್ಯ ತತ್ತ್ವದ ವಿಚಾರ ಅದರಲ್ಲಿ ಒಂದಷ್ಟಿದೆ.
ಈ ಪದ್ಯಗೀತೆಗಳಿಗೆ ಹಿನ್ನೆಲೆಯನ್ನೂ “ಬೇಲೂರುಗುಡಿ” ಎಂಬ ಎ.ಐ.ಆರ್. ಭಾಷಣದಲ್ಲಿ ಕಾಣಬಹುದು. ಸೌಂದರ್ಯಕ್ಕೂ ಧರ್ಮಕ್ಕೂ ಇರುವ ಸಂಬಂಧವನ್ನು ಅಲ್ಲಿಯೂ ಸಂಕ್ಷೇಪವಾಗಿ ಪ್ರಸ್ತಾವಿಸಿದೆ. (“ಅನ್ತಃಪುರಗೀತೆ”, “ಬೇಲೂರುಗುಡಿ” –ಇವೆರೆಡೂ ಮೈಸೂರು ಕಾವ್ಯಾಲಯದ ಪ್ರಕಟನೆಗಳು.)
ಈಚೆಗೆ (೨೬-೧-೧೯೫೬) ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದಿಂದ ಪ್ರಕಟವಾದ “ಅರೆಮೂಕ” ಎಂಬ ಹೆಸರಿನ ಲೇಖನ ಸಂಗ್ರಹದಲ್ಲಿ (ಕಾಲೆಜ್ ಬರವಣಿಗೆ–೧೦), ಆ ಹೆಸರಿನ ಹಾಡನ್ನು ಕುರಿತ ವ್ಯಾಖ್ಯಾನವೊಂದು ಸೇರಿದೆ. ಹೀಗೆ ವಿದ್ಯಾರ್ಥಿಗಳಿಗೆ ಒಪ್ಪಿಗೆಯಾದ ಹಾಡು ಪುಸ್ತಕದಲ್ಲಿದ್ದರೆ ಉಪಯೋಗವಾದೀತೆಂದು ಅದನ್ನಿಲ್ಲಿ ಸೇರಿಸಿದೆ. ಅದು ಮೊದಲು ಪ್ರಕಟವಾದದ್ದು “ಪ್ರಬುದ್ಧ ಕರ್ಣಾಟಕ” ಪತ್ರಿಕೆಯ ೧೯೨೬ರ ವಿನಾಯಕನ ಸಂಚಿಕೆಯಲ್ಲಿ (VIII-1).
ಈ ಪುಸ್ತಕದ ವಿಷಯ ಲೇಖಕನ ಮನಸ್ಸಿಗೆ ಬಂದಾಗಲೆಲ್ಲ ಒಡಗೂಡಿ ಜ್ಞಾಪಕಕ್ಕೆ ಬರುವ ಹೆಸರುಗಳು ಬೆಳ್ಳಾವೆಯ ವೆಂಕಟನಾರಣಪ್ಪನವರು, ಟಿ.ಎಸ್.ವೆಂಕಣ್ಣಯ್ಯ–ಇವರವು. ಅವರು ಇಲ್ಲಿಯ ಮುನ್ನುಡಿಯಲ್ಲಿ ನೆನೆದಿರುವ “ಗೆಳೆಯರ್”, “ಸರಳರ್”. ಅಂಥ ಜನ ನಮ್ಮ ನಾಡಿನಲ್ಲಿ ಈಗಲೂ ಕೆಲವರಾದರೂ ಇದ್ದಾರಲ್ಲವೆ? ಹಾಗೆಂಬ ನಂಬಿಕೆ ಲೇಖಕನಿಗೆ ಈಗ ಇರುವ ಧೈರ್ಯ.