ಗಂಗಾದೇವಿ ಮಂಡೆಯಾದಳು
ಗೌರೀದೇವಿ ಓಲೆಯ ಕಳೆದಳು
ಚಂದ್ರಸೂರ್ಯರಿಬ್ಬರೂ ನೀರಿಳಿದರಲ್ಲಾ !
ವಾಯುದೇವ ವಿಮಾನವ ಹೊತ್ತ
ವಾಸುದೇವ ತಲೆಗೊಳ್ಳಿಯನಿರಿದ
ಅಲ್ಲಿಂದತ್ತ, ಗೋಗೇಶ್ವರ ಸತ್ತನೆಂಬ ಸುದ್ದಿ.
೨.
ನಾನು ಭಕ್ತನಾದಡೆ
ನೀನು ದೇವನಾದಡೆ
ನೋಡುವೆವೇ ಇಬ್ಬರ ಸಮರಸವೊಂದುಮಾಡಿ?
ಭೂಮಿಯಾಕಾಶವನೊಂದು ಮಾಡಿ
ಚಂದ್ರಸೂರ್ಯರಿಬ್ಬರ ತಾಳವ ಮಾಡಿ
ಆಡುವೆವೆ?
ಜಡೆಯ ಮೇಲಣ ಗಂಗೆ ನೀನು ಕೇಳಾ
ತೊಡೆಯ ಮೇಲಣ ಗೌರಿ ನೀನು ಕೇಳಾ
ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ
ರಂಡೆಗೊಳನುಂಬದು ನಿಮಗೆ ಲೇಸೆ?
೩.
ಅತಿರಥ ಸಮರಥರೆನಿಪ
ಹಿರಿಯರು ಮತಿಗೆಟ್ಟು ಮರುಳಾದರಲ್ಲಾ!
ದೇವ ಸತ್ತ
ಬ್ರಹ್ಮ ಹೊತ್ತ
ವಿಷ್ಣು ಕಿಚ್ಚ ಹಿಡಿದ
ಗಂಗೆ-ಗೌರಿಯರಿಬ್ಬರು ಬಱುಮುಂಡೆಯರಾದರು
ಇದು ಕಂಡು ಬೆಱಗಾದೆ ಗುಹೇಶ್ವರ
ನಿನ್ನೆಯ ನಾಟಕ ವಾಚನ ಚೆನ್ನಾಗಿತ್ತು. ಗಿರೀಶರ ’ಯಯಾತಿ’ಯನ್ನು ಓದುವಾಗ ಬೇರೆ ಬೇರೆ ಪಾತ್ರಗಳನ್ನು ಬೇರೆ ಬೇರೆಯವರು ಓದಿದರು. ಒಂದು ದೃಷ್ಟಿಯಲ್ಲಿ ನಾಟಕದ ರಸವೇ ಅಲ್ಲಿ ಒಡಮೂಡಿತ್ತು. ನಾಟಕವನ್ನು ಅರ್ಧದಷ್ಟು ಓದಲಾಯಿತು, ಇದನ್ನೇ ಮುಂದಿನ ಸಭೆಯಲ್ಲಿ ಮುಂದುವರಿಸಬೇಕೆಂದಿದ್ದೇವೆ. ನಾಟಕದ ನಂತರ ಕೆಲವು ಸ್ವರಚಿತ ಕವನಗಳು ಮತ್ತು ಮಲೆದೇಗುಲದ ಒಂದು ಪದ್ಯ, ಮತ್ತು ಸಾಕಷ್ಟು ಹರಟೆಗಳಾದವು. ಈ ಸಂದರ್ಭದಲ್ಲಿ ಉಲ್ಲೇಖಿಸಿದ ಕೆಲವು ವಚನಗಳನ್ನು ಇಲ್ಲಿ ಕಳುಹಿಸುತ್ತಿದ್ದೇನೆ.
ಶನಿವಾರ ಸಂಜೆ ಭೇಟಿ ಮಾಡುತ್ತಿರುವುದು ನಿಮಗೆ ಅನಾನುಕೂಲ ಎಂದು ಅನಿಸುತ್ತಿದೆಯೇ? ತಿಳಿಸಿ. ಮುಂದಿನ ಕವನ ವಾಚನ ದಿನಾಂಕ, ದಿನ ಮತ್ತು ಸ್ಥಳದ ಬಗ್ಗೆ ನಿನ್ನೆ ಮಾತನಾಡಲಿಲ್ಲ. ನಿಮ್ಮೆಲ್ಲರ ಅನುಕೂಲದಂತೆ ಅದನ್ನು ನಿರ್ಧರಿಸೋಣ.
ಇತಿ,
ಹರೀಶ