ಸಹಸ್ಪಂದನ - ಒಂದು ಮೆಚ್ಚುಗೆಯ ಮಾತು

17 views
Skip to first unread message

Gananath

unread,
Feb 14, 2015, 12:56:54 AM2/14/15
to sahasp...@googlegroups.com

ಇತ್ತೀಚೆಗೆ ನಡೆದ ಸಹಸ್ಪಂದನದ ಕಾರ್ಯಕ್ರಮದ ಬಗ್ಗೆ ಭಾಗವಹಿಸಿದ್ದ ಶ್ರೀ ರೋಹಿತ್ ಚಕ್ರತೀರ್ಥ ರು ಭಾಗವಹಿಸಿದ್ದರು. ರೋಹಿತ್ ಅವರು ಬಹು ಪ್ರತಿಭೆಯ ಕ್ರಿಯಾಶೀಲ ಹಾಗೂ ಉತ್ಸಾಹಿ ವ್ಯಕ್ತಿ. ಈಗ Pearson ಕಂಪನಿಯಲ್ಲಿ ದುಡಿಯುತ್ತಿದ್ದು ಅನೇಕ ವರ್ಷಗಳಿಂದ ಕನ್ನಡದಲ್ಲಿ ಸಾಹಿತ್ಯಕೃಷಿ ಮಾಡಿಕೊಂಡು ಬಂದಿದ್ದಾರೆ. ಅವರ ಮೊದಲ ಲೇಖನ ತರಂಗದಲ್ಲಿ ಪ್ರಕಟವಾದಾಗ ಅವರು ಏಳೋ ಎಂಟನೆಯದೋ ತರಗತಿಯಲ್ಲಿದ್ದರಂತೆ!  ಕನ್ನಡ ಪತ್ರಿಕೆಯೊಂದನ್ನು ಗೆಳೆಯರ ಒಡಗೂಡಿ ಹೊರತರುವ ಕನಸಿನ ಹಿಂದೆ ಬಿದ್ದಿರುವ ರೋಹಿತ್ ಮೊನ್ನೆ ಸಿಕ್ಕಾಗ "ಏಪ್ರಿಲ್ ಗೆ ಪತ್ರಿಕೆ ಬರಬಹುದು" ಎಂದು ಉತ್ಸಾಹದಿಂದ ಹೇಳುತ್ತಿದ್ದರು. 

ಅವರು ಮೊನ್ನೆ ಫೇಸ್ ಬುಕ್ಕಿನಲ್ಲಿ ಬರೆದದ್ದು ಹೀಗೆ.

ಫೇಸ್-ಬುಕ್ಕಿನಲ್ಲಿ ಆದ ಪರಿಚಯ ಒಂದು ಒಳ್ಳೆಯ ಸಂಬಂಧಕ್ಕೆ ಮುನ್ನುಡಿ ಬರೆಯಿತು.

ನನ್ನ ಗೆಳೆಯರ ಬಳಗದಲ್ಲಿ Gananath SN ಎಂಬ ಹಿರಿಯರಿದ್ದಾರೆ. ಗಣಿತದ ಮೇಲಿನ ಪ್ರೀತಿ ನಮ್ಮಿಬ್ಬರನ್ನೂ ಹತ್ತಿರ ತಂದಿತ್ತು. ಗಣನಾಥರು, ಹಲವು ದಶಕಗಳ ಕಾಲ ಗಣಿತದ ಅಧ್ಯಾಪನ, ವರ್ಕ್-ಶಾಪುಗಳು, ಓರಿಯಂಟೇಶನ್ ಪ್ರೋಗ್ರಾಮುಗಳು - ಎಂದು ಏನೇನನ್ನೋ ಬೆನ್ನಿಗೆ ಕಟ್ಟಿಕೊಂಡು ಕೆಲಸ ಮಾಡಿದವರು. ನನ್ನ ಬರಹಗಳನ್ನು ಮೆಚ್ಚಿಕೊಂಡು ಆಗೀಗ ಲೈಕ್, ಕಾಮೆಂಟ್ ಮಾಡುತ್ತಿದ್ದರು. ತಮಗೆ ಖುಷಿ ಕೊಟ್ಟ ಕೆಲ ಸಂಗತಿಗಳನ್ನು ನನ್ನ ಜೊತೆ ಹಂಚಿಕೊಂಡು, ಇವುಗಳ ಮೇಲೆ ಲೇಖನ ಬರೀರಿ ಅನ್ನುತ್ತಿದ್ದರು.

ಎರಡು ದಿನದ ಹಿಂದೆ ಇವರು, ನಾವೇ ಒಂದಷ್ಟು ಜನ ಸುಮ್ಮನೆ ಹಾಗೇ ಒಂದು ದಿನ ಸಂಜೆ ಸೇರುವವರಿದ್ದೇವೆ. ನಮಗಿಷ್ಟವಾದ ಕವಿತೆಗಳನ್ನು ಓದಿ, ಖುಷಿ ಹಂಚಿಕೊಳ್ಳುವ ಕಾರ್ಯಕ್ರಮ ಅದು. ಅನೌಪಚಾರಿಕವಾಗಿರುತ್ತದೆ; ಭಾಷಣ-ಗೀಷಣ ಅಂತ ಕೊರೆದು ಯಾರ ತಲೆಗೂ ಹುಳ ಬಿಡೋದಿಲ್ಲ. ಸ್ವಾಗತ, ಧನ್ಯವಾದ ಸಮರ್ಪಣೆ ಅಂತೆಲ್ಲ ಇರೋದಿಲ್ಲ. ಮಾತು, ಹರಟೆ, ಕಾವ್ಯ ಇರುತ್ತದೆ. ಬನ್ನಿ - ಎಂದು ಮೇಲಿಸಿದ್ದರು. ಸಭೆ, ಸಮಾರಂಭಗಳು ಎಂದೊಡನೆ ತಲೆ ತಪ್ಪಿಸಿಕೊಂಡು ಓಡಾಡುವ ನಾನು ಯಾಕೋ ಈ ಕಾರ್ಯಕ್ರಮಕ್ಕೆ ಹೋಗಬೇಕು ಅಂದುಕೊಂಡೆ.

ಇವೊತ್ತು ಸಂಜೆ, ಹೇಳಿಕೊಂಡಂತೆ, ಜಯನಗರದ ಆರ್.ವಿ. ಟೀಚರ್ಸ್ ಕಾಲೇಜಲ್ಲಿ ಸೇರಿದೆವು. ನಮ್ಮ ನಮ್ಮ ಇಷ್ಟದ ಕವಿತೆಗಳನ್ನು ಆಪ್ತರೆದುರು ಓದಿದೆವು. ಒಬ್ಬರು ಓದಿದ ಕವಿತೆಗೆ ಸಂವಾದಿಯಾಗಿ ಇನ್ನೊಬ್ಬರು ಇನ್ನೊಂದು ಕವಿತೆ ಓದಿದರು. ಒಟ್ಟಲ್ಲಿ, ಅಲ್ಲಿ ಕವಿತೆಗಳೇ ತಮ್ಮತಮ್ಮ ಸುಖಕಷ್ಟ ಕೇಳುತ್ತಿರುವಂತೆ, ಹರಟೆ ಹೊಡೆಯುತ್ತಿರುವಂತೆ, ಪರಸ್ಪರ ಬೆನ್ನು ಚಪ್ಪರಿಸುವಂತೆ ನಮಗೆ ಭಾಸವಾಯಿತು! ರಾಮಚಂದ್ರ ಶರ್ಮ, ಅನಂತಮೂರ್ತಿ, ಕಂಬಾರ, ಚೇತನಾ ತೀರ್ಥಹಳ್ಳಿ, ಶಿವಪ್ರಕಾಶ್, ಪಾವೆಂ, ಮಧುರಚೆನ್ನ, ನಾ ಮೊಗಸಾಲೆ, ಅಡಿಗ - ಇವರೆಲ್ಲ ಬಂದು, ಕೂತು, ಒಂದಷ್ಟು ಹೊತ್ತು ನಮ್ಮ ಜೊತೆ ಇದ್ದು ಹೋದರು. ಧಾರವಾಡ, ಮೈಸೂರುಗಳಿಂದ ಗೆಳೆಯರು ಫೋನ್ ಮೂಲಕ ಕವಿತೆ ಓದಿದರು! ಒಬ್ಬರು ಫೋನ್-ನಲ್ಲೇ ಗೀಯ ಪದವನ್ನೂ ಸುಶ್ರಾವ್ಯವಾಗಿ ಹಾಡಿದರು! ಬಿಎಸ್ಸೆನ್ನೆಲ್ ಉದ್ಯೋಗಿ, ಇಂಗ್ಲಿಶ್ ಉಪನ್ಯಾಸಕ, ಗಣಿತದ ಪ್ರೊಫೆಸರ್, ಹಣಕಾಸು ಇಲಾಖೆಯ ಅಧಿಕಾರಿ - ಹೀಗೆ ಹತ್ತುಹಲವು ಉದ್ಯೋಗಗಳಲ್ಲಿ ಹಂಚಿಹೋದವರು ಕಾವ್ಯಪ್ರೀತಿಯೇ ಕಾರಣವಾಗಿ ಅಲ್ಲಿ ಒಟ್ಟು ಸೇರಿದ್ದರು.

ಕಾವ್ಯವನ್ನು ಅಫೀಮಿನಂತೆ ಪ್ರೀತಿಸುವ ರಸಿಕರ ಜೊತೆ ಒಂದು ಅರ್ಥಪೂರ್ಣ ಸಂಜೆ ಕಳೆದದ್ದು ಹಿತಕರವಾಗಿತ್ತು.



ಗಣನಾಥ

 ಸಹಸ್ಪಂದನವನ್ನು ಫೇಸ್ ಬುಕ್ಕಿಗೂ ವಿಸ್ತರಿಸಿದರೆ ಚೆನ್ನಾಗಿರುತ್ತದಲ್ಲವೇ? ಎಂದು ನಾನು ಮತ್ತು ಬೃಂದಾ ಮೊನ್ನೆ ಮತಾಡಿಕೊಂಡೆವು.

ನಿಮಗೇನೆನಿಸುತ್ತದೆ?


Reply all
Reply to author
Forward
0 new messages