एक प्रेम पत्र कन्नड़ में

28 views
Skip to first unread message

Shreenivas Naik

unread,
Jun 9, 2019, 12:08:13 AM6/9/19
to hind...@googlegroups.com
ಹಿಂದೀ ಎಂಬ ನುಡಿಬೆಡಗಿಗೆ ಪ್ರೇಮಪತ್ರ, ಕನ್ನಡದಲ್ಲಿ!

[ತಿಳಿರುತೋರಣ  *  09Jun2019 * ಶ್ರೀವತ್ಸ ಜೋಶಿ]

ಅಕ್ಕರೆಯ ಸಕ್ಕರೆಯ ‘ಹಿಂದೀ ಭಾಷೆ’ ಎಂಬ ಚೆಂದುಳ್ಳಿ ಚೆಲುವೆಯೇ, ನಿನಗೊಂದು ಪ್ರೇಮದ ಪತ್ರ ಬರೆಯೋಕೆ ನನಗಾಸೆ. ಕನ್ನಡದಲ್ಲಿ ಬರೆಯುತ್ತಿದ್ದೇನೆ, ಅರ್ಥ ಮಾಡ್ಕೊಳ್ತಿ ತಾನೆ? ನಿನಗಷ್ಟೇ ಅಲ್ಲ, ಈ ಬಹಿರಂಗ ಪತ್ರದ ಅನನ್ಯತೆ, ಆಶಯ, ಇಂಗಿತಗಳು ಇದನ್ನೋದುವವರಿಗೆಲ್ಲ ಅರ್ಥವಾಗಬೇಕು ಎಂದು ನನ್ನ ಉದ್ದೇಶ.

‘ಹೇಗಿದ್ದೀ?’ ಎಂದು ನಿನ್ನ ಕ್ಷೇಮಸಮಾಚಾರ ಕೇಳಿದರೆ ನಿನ್ನ ಉತ್ತರ ‘ನನಗೇನಾಗಿದೆ? ಏಕ್‌ದಂ ಬಿಂದಾಸ್ ಆಗಿದ್ದೇನೆ.’ ಅಂತನೇ ಇರುತ್ತೆ ಎಂದು ನನಗ್ಗೊತ್ತಿದೆ. ಅದು ನಿಜವೇ ಅನ್ನು. ‘ಎಲ್ಲೋ ಒಂದಿಷ್ಟು ಮಂದಿಗೆ ನಿನ್ನ ಮೇಲೆ ದ್ವೇಷವಿದೆ, ಈರ್ಷ್ಯೆಯಿದೆ, ನಿನ್ನನ್ನು ಅವರ ಮೇಲೆ ಹೇರಲಾಗುತ್ತಿದೆ ಎಂಬ ಆಕ್ರೋಷವಿದೆ’ ಎಂದು ನಿನ್ನನ್ನು ತಿವಿದರೂ ‘ಕತ್ತೆ ಬಾಲ ಕುದುರೆ ಜುಟ್ಟು. ದ್ವೇಷ ಆಕ್ರೋಷಗಳು ಅವರಿಗಾಯ್ತು. ನನಗೇನಂತೆ?’ ಎಂದು ಮೂಗು ಮುರಿವವಳು ನೀನು - ಎಂಬತ್ತರ ದಶಕದಲ್ಲಿ ದೂರದರ್ಶನದ ಹಿಂದೀ ಧಾರಾವಾಹಿಗಳಲ್ಲಿನ ಶುಭಾ ಖೋಟೆ ಅಥವಾ ರೀಮಾ ಲಾಗೂ ಮುಂತಾದ ಸಾಸ್‌ಗಳ ಮಾದರಿ, ಜರಾ ಸಾ ಗಯ್ಯಾಳಿತನ ಮೇಳೈಸಿಕೊಂಡು. 

ಹೋಗಲಿ ಬಿಡು. ಪ್ರೇಮಪತ್ರದಲ್ಲಿ ದ್ವೇಷ-ಆಕ್ರೋಷಗಳೆಲ್ಲ ಯಾಕೆ ಬೇಕು ಅಲ್ವಾ? ನನಗಂತೂ ಎಲ್ಲ ಭಾಷೆಗಳ ಮೇಲೆ ಪ್ರೀತಿಯಿದೆ. ಅಂತೆಯೇ ನಿನ್ನ ಮೇಲೂ. ಹಾಗಾಗಿಯೇ ಇದನ್ನು ಪ್ರೇಮಪತ್ರ ಎಂದಿರುವುದು. ಸರಿ, ಎಲ್ಲಿಂದ ಶುರುಮಾಡೋಣ? ಮೊತ್ತಮೊದಲಿಗೆ ನನಗೆ ನಿನ್ನ ಪರಿಚಯವಾದಾಗಿನಿಂದ? ಅಲ್ಲ, ನಾನು ಹುಟ್ಟಿ ಬೆಳೆದ ಪರಿಸರದ ವಿವರಗಳೊಂದಿಷ್ಟನ್ನು ಬರೆದರೇನೇ ನಿನ್ನಂಥ ಭಾಷೆಗಳ ಮೇಲೆ ಮಮತೆ ಮಮಕಾರ ನನ್ನಲ್ಲಿ ಹೇಗೆ ಹುಟ್ಟಿತು, ನಿನ್ನನ್ನೂ ಹೇಗೆ ಸಂತೋಷದಿಂದಲೇ ಅಪ್ಪಿಕೊಂಡೆ ಅಂತೆಲ್ಲ ಸುಲಭವಾಗಿ ಅರ್ಥವಾಗುತ್ತದೆ. ದಕ್ಷಿಣಕನ್ನಡ (ಈಗಿನ ಉಡುಪಿ) ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ನಾನು. ಶತಮಾನಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿಯಿಂದ ವಲಸೆ ಬಂದು ದಕ್ಷಿಣಕನ್ನಡದ ವಿವಿಧ ಪ್ರದೇಶಗಳಲ್ಲಿ ನೆಲೆಯೂರಿದ ‘ಚಿತ್ಪಾವನ’ ಸಮುದಾಯದವನು. ಹಾಗಾಗಿ ನನ್ನ ಮಾತೃಭಾಷೆ ‘ಚಿತ್ಪಾವನಿ’. ನಾನು ಕಲಿತ ಮೊತ್ತಮೊದಲ ಭಾಷೆ. ಮರಾಠಿಯದೇ ಒಂದು ಡಯಾಲೆಕ್ಟ್. ಮರಾಠಿ ಎಂದೇ ಹೇಳೋಣ. ಮನೆಮಾತು ಈಗಲೂ ಅದೇ ಭಾಷೆಯಲ್ಲಿ. ಆದರೆ ಹಳ್ಳಿಯಲ್ಲಿ ಬೇರೆ ಸಮುದಾಯಗಳವರು, ಬೇರೆ ಭಾಷೆ ಮಾತಾಡುವವರೂ ಇರುತ್ತಾರಲ್ಲ? ನಮ್ಮನೆಗೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ತುಳು ಮಾತಾಡುವವರು. ಎರಡು-ಮೂರರ ವಯಸ್ಸಿಗೆಲ್ಲ ನಾನು ಕಲಿತ ಎರಡನೆಯ ಭಾಷೆ ತುಳು. ಆಗಿನ್ನೂ ನಾನು ಚಡ್ಡಿ ಕೂಡ ಹಾಕ್ತಿದ್ನೋ ಇಲ್ಲವೋ, ನಮ್ಮನೆಯ ಕೆಲಸದಾಳು ಸುಂದರ ಎಂಬುವವ ನನ್ನನ್ನು ಹಾಗೆಯೇ ಎತ್ತಿಕೊಂಡು ಹೋಗುತ್ತಿದ್ದ- ಗುಡ್ಡಕ್ಕೆ, ದನಕರುಗಳನ್ನು ಮೇಯಲು ಬಿಟ್ಟುಬರಲಿಕ್ಕೆ. ಹಿಂದೆ ಬರುವಾಗ ಕೇಪಳ, ನೇರಳೆ, ಮುಳ್ಳುಹಣ್ಣು ಭಕ್ಷಣ. ಸುಂದರನೊಟ್ಟಿಗೆ ಕಾಡು-ಗುಡ್ಡಕ್ಕೆ ಹೋಗಲಿಕ್ಕೆ ಅದು ಪ್ರಲೋಭನೆ. ಅವನು ನನಗೆ ತುಳು ಭಾಷೆಯನ್ನೂ, ನಾನವನಿಗೆ ಚಿತ್ಪಾವನಿ ಭಾಷೆಯನ್ನೂ ಕಲಿಸಿದೆನೆಂದು ನೆನಪು. 

ಒಂದನೆಯ ತರಗತಿಯಿಂದ ಐದನೆಯ ತರಗತಿಯವರೆಗೆ ನಾನೋದಿದ್ದು ನಮ್ಮನೆಗೆ ಹತ್ತಿರದಲ್ಲೇ ಇದ್ದ ಸ.ಕಿ.ಪ್ರಾ.ಶಾಲೆಯಲ್ಲಿ. ಕನ್ನಡ ಮಾಧ್ಯಮದ, ಏಕೋಪಾಧ್ಯಾಯ ಏಕ ಕೊಠಡಿಯ ಶಾಲೆ. ಪ್ರತಿವರ್ಷವೂ ಐದೂ ತರಗತಿಗಳ ಪಾಠಗಳನ್ನು ಕೇಳಿಸಿಕೊಳ್ಳುವ ಸುಯೋಗ. ಶಾಲೆಯಲ್ಲಿದ್ದ ಒಟ್ಟು ಮೂವತ್ತು-ಚಿಲ್ಲರೆ ಮಕ್ಕಳೆಲ್ಲರೂ, ಚಿತ್ಪಾವನ ಸಮುದಾಯವರೇ. ಉಪಾಧ್ಯಾಯರು ಮಾತ್ರ ಕನ್ನಡದವರು. ಆಗೆಲ್ಲ ಶಾಲೆ/ಶಿಕ್ಷಣ ಅಂತಂದ್ರೆ ಎಷ್ಟು ಭಯ-ಗೌರವ ಇರುತ್ತಿತ್ತೆಂದರೆ ಶಾಲೆಯಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯ ಒಂದು ಶಬ್ದ ಕೂಡ ಮಾತನಾಡಲಿಕ್ಕಿಲ್ಲ. ‘ಹಸಿಗೋಡೆಯಲ್ಲಿ ಹರಳು ನೆಟ್ಟಂತೆ’ ಕನ್ನಡ ನನ್ನ ತಲೆಯೊಳಕ್ಕೆ ಹೋದದ್ದು, ನಾನು ಕಲಿತ ಮೂರನೆಯ ಭಾಷೆಯಾಗಿ. ಐದನೆಯ ತರಗತಿಗೆ ಬಂದಾಗ ಇಂಗ್ಲಿಷ್, ನನಗೆ ಓದಲಿಕ್ಕೆ/ಬರೆಯಲಿಕ್ಕೆ ಬರುವ ನಾಲ್ಕನೆಯ ಭಾಷೆಯಾಗಿ ಅದರ ಎಂಟ್ರಿ! ಅದುವರೆಗೆ ಸ್ಲೇಟಿನಲ್ಲಿ ಬಳಪದಿಂದ, ಕಾಗದದ ಮೇಲಾದರೆ ಪೆನ್ಸಿಲ್‌ನಿಂದ ಬರೆಯುತ್ತಿದ್ದವನಿಗೆ ಮೊದಲಬಾರಿಗೆ ಇಂಕ್ ಪೆನ್ನಿಂದ, ನಾಲ್ಕು ಗೆರೆಗಳ ಕಾಪಿಬುಕ್‌ನಲ್ಲಿ ಇಂಗ್ಲಿಷ್ ಬರೆಯುವುದಕ್ಕೆ ಪ್ರಮೋಷನ್! ‘ಹಾಟ್ ಕ್ರಾಸ್ ಬನ್ಸ್... ವನ್ ಎ ಪೆನ್ನಿ ಟೂ ಎ ಪೆನ್ನಿ ಹಾಟ್ ಕ್ರಾಸ್ ಬನ್ಸ್...’ ಪದ್ಯ ಕಲಿಕೆ. ಅದು ಕನ್ನಡದ ಮೇಲೆ ಛೂಮಂತ್ರ ಹಾಕಿತೆಂದೇನಿಲ್ಲ. ನೂಲೊಲ್ಯಾಕ ಚೆನ್ನಿ, ಲೋಹಿತಾಶ್ವನ ಸಾವು, ಸೋಮೇಶ್ವರ ಶತಕದ ಪದ್ಯಗಳನ್ನೆಲ್ಲ ಬಾಯಿಪಾಠ ಕಲಿತದ್ದು ಈಗಲೂ ನಾಲಿಗೆಯ ತುದಿಯಲ್ಲಿವೆ. ಆಮೇಲೆ ಆರನೆಯ ಮತ್ತು ಏಳನೆಯ ತರಗತಿಗಳನ್ನು ಊರ ಕೇಂದ್ರದ ಗುರುಕುಲ ಹಿ.ಪ್ರಾ. ಶಾಲೆಯಲ್ಲಿ ಓದಿದ್ದು. ಬಹು ಕೊಠಡಿಗಳ, ಆರೇಳು ಮಂದಿ ಶಿಕ್ಷಕ/ಶಿಕ್ಷಕಿಯರಿದ್ದ ಶಾಲೆ. ಮುಖ್ಯೋಪಾಧ್ಯಾಯರಾಗಿದ್ದ ಮೂರ್ತಿಮಾಷ್ಟ್ರು ಶಿಸ್ತಿನ ಮೂರ್ತಿ. ಕನ್ನಡ ಭಾಷೆಯ ಬೇರುಗಳು ನನ್ನೊಳಗೆ ಮತ್ತಷ್ಟು ಗಟ್ಟಿಯಾಗಿ ಇಳಿಯುವುದಕ್ಕೆ ಕಾರಣ ನಮ್ಮೆಲ್ಲರ ನೆಚ್ಚಿನ ವಸಂತಿ ಟೀಚರ್. ಪ್ರತಿದಿನವೂ ಕನ್ನಡ ಅವಧಿಯ ಆರಂಭದಲ್ಲಿ ‘ಶ್ರೀ ವಾಗ್ದೇವಿಗೆ ಶಬ್ದದಿ ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳುದ್ಭಾವಿಪ ನಿರ್ಮಲ ಮೂರ್ತಿಗಿಳಾವಂದ್ಯೆಗೆ ಶಾಸ್ತ್ರ ಮುಖದೊಳ ವನತನಪ್ಪೆಂ’ ಕೇಶಿರಾಜನ ಶಬ್ದಮಣಿದರ್ಪಣಂ ಸ್ತುತಿಯನ್ನು ಹೇಳಿದ ಮೇಲೆಯೇ ಪಾಠ ಶುರು. ಕನ್ನಡ ಭಾಷೆಯ ಬಗ್ಗೆ ಪ್ರೀತ್ಯಭಿಮಾನ ‘ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ, ಹರ್ಷ ಉಕ್ಕಿಸುವಂತೆ ಶೋಭಾಯಮಾನ’ ಸ್ವಲ್ಪವಾದರೂ ನನ್ನಲ್ಲಿದ್ದರೆ ವಸಂತಿಟೀಚರ್ ಕಾರಣ.

ಆರನೆಯ ತರಗತಿಯಲ್ಲಿದ್ದಾಗಲೇ ನನ್ನ ಜೀವನದಲ್ಲಿ ನಿನ್ನ ಪ್ರವೇಶವಾದದ್ದು! ಅದೇ, ಪಠ್ಯಕ್ರಮದಲ್ಲಿ ತೃತೀಯ ಭಾಷೆಯಾಗಿ ಹಿಂದೀ ಕಲಿಕೆ. ವೈಯಕ್ತಿಕವಾಗಿ ನನ್ನ ಬುಟ್ಟಿಗೆ ಸೇರಿದ ಐದನೆಯ ಭಾಷೆ!  ಶಿಕ್ಷಕರಾಗಿದ್ದವರು ‘ಹಿಂದೀರತ್ನ’ ಓದಿಕೊಂಡಿದ್ದ ನಾಗಭೂಷಣ ಜೋಶಿ, ನನಗವರು ದೊಡ್ಡಪ್ಪನ ಮಗ. ಆದರೆ ಆ ಸಂಬಂಧ-ಸಲುಗೆಗಳೆಲ್ಲ ಶಾಲೆಯಲ್ಲಲ್ಲ. ಅವರು ನಮಗೆ ಬಹಳ ಚೆನ್ನಾಗಿ ಹಿಂದೀ ಕಲಿಸಿದರು. ತಿತ್ಲೀ ರಾನೀ ಬೋಲೋ ಬೋಲೋ, ಚಾಹ್ ನಹೀ ಮೈ ಸುರ್ ಬಾಲಾಕೇ, ಏಕ್ ರಹಾ ಕರ್‌ತಾ ಥಾ ನಾ‌ಈ... ಮುಂತಾದ ಪದ್ಯಗಳನ್ನು, ಬಾತೂನೀ ಕಛು‌ಆ, ಬುಢಿಯಾ ಕಾ ಅಧಖಾಯಾ ಅನಾರ್ ಮುಂತಾದ ಪಾಠಗಳನ್ನು, ಅವುಗಳ ನೀತಿಯನ್ನು ನಮ್ಮ ಮಸ್ತಿಷ್ಕದಲ್ಲಿ ಎರಕಹೊಯ್ದರು. ನಾನು ಶೈಕ್ಷಣಿಕವಾಗಿ ಹಿಂದೀ ಕಲಿತದ್ದು ಆರು ಮತ್ತು ಏಳನೆಯ ತರಗತಿಗಳಲ್ಲಿ ಮಾತ್ರ. ಆದರೆ ಅದು ‘ಪರೀಕ್ಷೆಗಾಗಿಯಷ್ಟೇ’ ಕಲಿತದ್ದಲ್ಲ. ಭೂತಕಾಲದ ವಾಕ್ಯಗಳಲ್ಲಿ ಕರ್ತೃಪದಕ್ಕೆ ‘ನೇ’ ಸೇರಿಸಬೇಕು, ಲಾ ಬೋಲ್ ಭೂಲ್ ಲಗ್ ಸಕ್ ಚುಕ್ - ಈ ಆರು ಕ್ರಿಯಾಪದಗಳಿದ್ದರೆ ಕರ್ತೃಪದಕ್ಕೆ ‘ನೇ’ ಅಂಟುವುದಿಲ್ಲ ಅಂತೆಲ್ಲ ವ್ಯಾಕರಣ ನಿಯಮಗಳು ನನಗೀಗಲೂ ನೆನಪಿವೆಯಾದರೆ, ಹಿಂದೀಯನ್ನು ನಾನು ಕಾಟಾಚಾರಕ್ಕೆ ಕಲಿತದ್ದಂತಾಗಲಿಕ್ಕೆ, ಅಥವಾ ನನ್ನ ಮೇಲೆ ಅದನ್ನು ಹೇರಲಾದದ್ದು ಅಂತನಿಸಲಿಕ್ಕೆ ಸಾಧ್ಯವೇ ಇಲ್ಲ! 

ನನ್ನ ಪ್ರೌಢಶಾಲೆ ಶಿಕ್ಷಣ ಕಾರ್ಕಳ ಪೇಟೆಯಲ್ಲಿರುವ ಶ್ರೀಮದ್ ಭುವನೇಂದ್ರ ಹೈಸ್ಕೂಲ್‌ನಲ್ಲಿ. ಅಲ್ಲಿ ಪ್ರಥಮ ಭಾಷೆಯಾಗಿ ಸಂಸ್ಕೃತ ಆಯ್ಕೆ. ಶ್ರೀಧರ ಆಚಾರ್ ಎಂಬುವವರು ನಮಗೆ ಸಂಸ್ಕೃತ ಅಧ್ಯಾಪಕರು. ರಾಮ ಶಬ್ದದಿಂದ ಮೊದಲ್ಗೊಂಡು ಬೇರೆಬೇರೆ ಶಬ್ದಗಳ ಲಿಂಗ, ವಚನ, ಲಕಾರಗಳ ಕೋಷ್ಟಕ ಮಾದರಿಯಲ್ಲಿ ಹೇಳುವ, ಸುಭಾಷಿತಗಳ ರಸಸಾರವನ್ನು ಹೀರುವ, ಮೃದುಲ-ಮಧುರ-ಮನೋಜ್ಞ-ಮಂಗಲ ದೇವಭಾಷೆಯ ಸತ್ಸಂಗದಿಂದ ಸಕಲ ವಿಧದಲ್ಲೂ ಸಮೃದ್ಧವಾಗುವ ಕಲೆ ಕರಗತವಾದದ್ದು ಆಗಲೇ. ಮುಂದೆ ಉಜಿರೆಯಲ್ಲಿ ಧ.ಮಂ.ಕಾಲೇಜಿನಲ್ಲಿ ಪಿಯುಸಿ ಓದುವಾಗ ಎರಡನೆಯ ಭಾಷೆಯಾಗಿ ಸಂಸ್ಕೃತವನ್ನೇ ಆಯ್ದುಕೊಂಡಿದ್ದರಿಂದ, ಇ.ಮಹಾಬಲ ಭಟ್ಟರು ಸಸೇಮಿರಾ ಕಥೆಯೇ ಮುಂತಾಗಿ ಸಂಸ್ಕೃತ ರಸಘಟ್ಟಿಗಳನ್ನು ಕಲ್ಲುಸಕ್ಕರೆಯಂತೆ ಚಪ್ಪರಿಸಲು ಕಲಿಸಿದ್ದರಿಂದ, ನಾನು ಕಲಿತ ಆರನೆಯ ಭಾಷೆಯಾಗಿ ಸಂಸ್ಕೃತ ನನ್ನೊಳಗಿಳಿಯಿತು. ನನ್ನ ನಡೆ-ನುಡಿಗಳನ್ನು ಸಂಸ್ಕರಿಸಿತು. ಈನಡುವೆ, ನನ್ನ ಪ್ರೌಢಶಾಲಾ ಸಹಪಾಠಿಗಳಲ್ಲಿ ಹೆಚ್ಚಿನವರು ಗೌಡಸಾರಸ್ವತ ಸಮುದಾಯದವರಾಗಿದ್ದರಿಂದ, ಅವರೆಲ್ಲ ಕೊಂಕಣಿ ಭಾಷೆಯಲ್ಲಿ ಮಾತನಾಡುತ್ತಿದ್ದುದರಿಂದ, ಕಾರ್ಕಳ ಪೇಟೆಯಲ್ಲಿನ ಬಹುತೇಕ ಅಂಗಡಿಮುಂಗಟ್ಟುಗಳೂ ಕೊಂಕಣಿ ಜನರವೇ ಆದ್ದರಿಂದ ನಾನು ಜೀವನದಲ್ಲಿ ಕಲಿತ ಏಳನೆಯ ಭಾಷೆಯಾಗಿ ಕೊಂಕಣಿ ನನ್ನ ತೆಕ್ಕೆಗೆ ಬಂತು. ಪ್ರೌಢಶಾಲೆ, ಪದವಿಪೂರ್ವ, ಮತ್ತು ಎಂಜಿನಿಯರಿಂಗ್ ಪದವಿ ವಿದ್ಯಾಭ್ಯಾಸದ ಬಳಿಕ ದಿಲ್ಲಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದ ಹಿಂದೀ ಭಾಷೆ ನನ್ನ ದಿಲ್ಲಿ ಜೀವನವನ್ನು ಸಲೀಸಾಗಿಸಿತು. ದಿಲ್ಲಿಯಿಂದ ಹೈದರಾಬಾದ್‌ಗೆ ವರ್ಗಾವಣೆಯಾಗಿ ಬಂದ ನಾನು ಅಲ್ಲಿ ತೆಲುಗು ಕಲಿತೆ. ನನ್ನ ಬುಟ್ಟಿಗೆ ಸೇರಿದ ಎಂಟನೆಯ ಭಾಷೆಯಾಯ್ತು ಅದು! ಹಾಗೆ ನೋಡಿದರೆ ಹೈದರಾಬಾದ್‌ನಲ್ಲಿ ಜೀವನ ಸಾಗಿಸಲಿಕ್ಕೆ ತೆಲುಗು ಬರಬೇಕೆಂದೇನಿಲ್ಲ. ಆದರೆ ನಾನು ಸ್ವಯಂ ಆಸಕ್ತಿಯಿಂದ ಕಲಿತೆ. ದಿನಾಸಂಜೆ ಹೈದರಾಬಾದ್ ದೂರದರ್ಶನದ ತೆಲುಗು ವಾರ್ತೆ ನೋಡುವೆ. ಆಕಾಶವಾಣಿಯಿಂದ ‘ಜನರಂಜನಿ- ಮೀರು ಕೋರಿನ ಪಾಟಲು’ ತೆಲುಗು ಚಿತ್ರಗೀತೆಗಳನ್ನು ಕೇಳುವೆ. ಗ್ರಂಥಾಲಯದಲ್ಲಿ ಈನಾಡು ಮತ್ತಿತರ ತೆಲುಗು ಪತ್ರಿಕೆಗಳನ್ನು ಓದುವೆ. ಸ್ವಾತಿ ಎಂಬ ತೆಲುಗು ವಾರಪತ್ರಿಕೆಯಲ್ಲಿ ಪದಬಂಧ ತುಂಬಿಸುವಷ್ಟು ಮಟ್ಟಿಗೆ ನಾನಲ್ಲಿ ತೆಲುಗು ಕಲಿತಿದ್ದೆ! ಹೈದರಾಬಾದ್ ಆಕಾಶವಾಣಿಯಲ್ಲಿ ಯುಗಾದಿ ವಿಶೇಷ ಕಾರ್ಯಕ್ರಮದಲ್ಲಿ ಒಂದು ತೆಲುಗು ಕವಿತೆ ಕೂಡ ವಾಚಿಸಿದ್ದೆ! ಇನ್ನೂ ಒಂದು ಸ್ವಾರಸ್ಯವಿದೆ. ಹೈದರಾಬಾದ್‌ನಲ್ಲಿ ನನ್ನ ಸಹೋದ್ಯೋಗಿ ಸ್ನೇಹಿತರನೇಕರು ತಮಿಳು ಮಾತನಾಡುವವರಾಗಿದ್ದರಿಂದ, ಅವರ ಸಖ್ಯದಲ್ಲಿ ನಾನು ತಮಿಳು ಭಾಷೆಯನ್ನೂ ನನ್ನ ಒಂಬತ್ತನೆಯ ಭಾಷೆಯಾಗಿ ಬುಟ್ಟಿಗೆ ಹಾಕಿಕೊಂಡೆ. ಓದಿ-ಬರೆಯುವ ಸಲೀಸುತನ ಇಲ್ಲದಿದ್ದರೂ ಮಾತನಾಡುವ, ಅರ್ಥಮಾಡಿಕೊಳ್ಳುವ ಸಾಮರ್ಥ್ಯ ದಕ್ಕಿತು. ಕೊಳಕಟ್ಟೈ, ಅಡೈ, ಕೊಳಂಬು, ಕೂಟ್ಟು ಮೊದಲಾಗಿ ತಮಿಳು ಆಹಾರ ಸಂಸ್ಕೃತಿಯ ಪರಿಚಯವಾದದ್ದೂ ಆ ಭಾಷೆಯ ಮೂಲಕವೇ. 

ಇದನ್ನೆಲ್ಲ ಹೇಳಿಕೊಂಡದ್ದು, ನಾನೊಬ್ಬ ಬಹುಭಾಷಾಪಂಡಿತ ಎಂದು ಬೀಗುವುದಕ್ಕಲ್ಲ. ಪಾಂಡಿತ್ಯದಿಂದ ಏನಾಗಬೇಕಿದೆ? ಆದರೆ ಈ ಎಲ್ಲ ಭಾಷೆಗಳು ನನ್ನ ವಿಶ್ಲೇಷಣಾ ಸಾಮರ್ಥ್ಯವನ್ನು ಹರಿತಗೊಳಿಸಿವೆ, ನೆನಪಿನ ಶಕ್ತಿಯನ್ನು ಹೆಚ್ಚಿಸಿವೆ, ಚಿಂತನೆಯನ್ನು ವಿಶಾಲವಾಗಿಸಿವೆ. ನನ್ನಲ್ಲಿ ಸ್ವಾಭಿಮಾನ, ಸೂಕ್ಷ್ಮಗ್ರಾಹಿತ್ವ, ಕ್ಷಮತೆ, ದಕ್ಷತೆಗಳನ್ನು ಸ್ವಲ್ಪವಾದರೂ ಬೆಳೆಸಿವೆ. ಇನ್ನೊಬ್ಬರೊಂದಿಗೆ ವ್ಯವಹರಿಸುವ ಕೌಶಲಕ್ಕೆ ಕುಸುರಿ ಒದಗಿಸಿವೆ. ಒಟ್ಟಿನಲ್ಲಿ ನನ್ನದೊಂದು ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಗಣನೀಯ ಪಾತ್ರ ವಹಿಸಿವೆ. ಇದು ನನ್ನೊಬ್ಬನ ಹಿರಿಮೆ ಹೆಗ್ಗಳಿಕೆ ಅಲ್ಲ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಈಗ ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಾದರೂ, ಇದು ತಮ್ಮ ಅನುಭವ ಮತ್ತು ಅಭಿಪ್ರಾಯವೂ ಹೌದು ಎನ್ನುವವರೇ. ಒಂಬತ್ತಲ್ಲದಿದ್ದರೂ ಕನಿಷ್ಠ ಐದಾರು ಭಾಷೆಗಳು ಅಲ್ಲಿನವರಿಗೆ ಗೊತ್ತಿರುತ್ತವೆ. ಬಹುಭಾಷೆಗಳಿಂದಾಗುವ ಪ್ರಯೋಜನ ಅವರಿಗೆಲ್ಲ ಸಿಕ್ಕಿರುತ್ತದೆ. 

ಇದೀಗ ‘ಹಿಂದೀ ಹೇರಿಕೆ’ ಎಂಬ ಗುಮ್ಮನದೇ ಸುದ್ದಿ ಆಗಿರುವಾಗ, ಇಂಥದೊಂದು ಆತ್ಮಾವಲೋಕನ ಮಾಡಿಕೊಳ್ಳೋಣ ಎಂದು ನನಗನಿಸಿತು. ಬೇರೆಬೇರೆ ಭಾಷೆಗಳ ಕಲಿಕೆ ಹೇಗೆ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ಸಿಂಹಾವಲೋಕನ ಮಾಡುತ್ತ, ಅದರಲ್ಲಿ ಹಿಂದೀ ಭಾಷೆಯ ಮಹತ್ವವೇನಿದೆ ಎಂದು ಸೂಕ್ಷ್ಮದರ್ಶಕದ ಕೆಳಗಿಟ್ಟು ನೋಡುವ ಕುತೂಹಲವಾಯಿತು. ಅಭಿಮಾನ ಉಕ್ಕಿ ಹರಿಯಿತು, ಹೀಗೊಂದು ಪ್ರೇಮಪತ್ರ ಬರೆಯುವ ಪ್ರೇರಣೆಯಾಯ್ತು. ಹಿಂದೀ ಭಾಷೆಯನ್ನು ನಾನು ಶೈಕ್ಷಣಿಕವಾಗಿ ಕಲಿತದ್ದು ಎರಡೇ ವರ್ಷವಾದರೂ ಆಮೇಲೆ ರೇಡಿಯೊ, ಟಿವಿ, ಮತ್ತು ಸಿನೆಮಾಗಳಿಂದಲೇ ಹಿಂದೀ ನನ್ನಲ್ಲಿ ಊರ್ಜಿತಾವಸ್ಥೆಯಲ್ಲುಳಿಯಿತು. ರೇಡಿಯೊದಲ್ಲಿ ಕ್ರಿಕೆಟ್ ಕಾಮೆಂಟರಿ, ಟೆಸ್ಟ್ ಪಂದ್ಯಗಳಾದರೆ ಐದು ದಿನ ಕಾಮೆಂಟರಿಯ ಸುಗ್ಗಿ. ‘ಯೇ ಆಂಖೋಂ ದೇಖಾಹಾಲ್ ಆಪ್ ಅಂಗ್ರೇಜೀ ಔರ್ ಹಿಂದೀ ಮೇ ಬಾರಿಬಾರಿ ಸೇ ಸುನ್ ಸಕ್ತೇ ಹೈಂ’ ಎಂದು ಎನೌನ್ಸ್ ಮಾಡುತ್ತಿದ್ದರು. ಹದಿನೈದು ನಿಮಿಷ ಹಿಂದೀ, ಹದಿನೈದು ನಿಮಿಷ ಇಂಗ್ಲಿಷ್, ಪುನರಾವರ್ತನೆ. ಹಿಂದೀಯಲ್ಲಿ ಕಾಮೆಂಟರಿ ಬರುವಾಗ ಭಾರತದ ಬ್ಯಾಟ್ಸ್‌ಮನ್ ಹೆಚ್ಚು ರನ್ ಗಳಿಸುತ್ತಾರೆ, ಬೌಲಿಂಗ್ ಆದರೆ ವಿಕೆಟ್ ಕಬಳಿಸುತ್ತಾರೆ ಅಂತೆಲ್ಲ ನಮ್ಮ ಪೊಳ್ಳು ಥಿಯರಿಗಳಿರುತ್ತಿದ್ದವು. ಕ್ರಿಕೆಟ್ ಕಾಮೆಂಟರಿ ಅಲ್ಲದೆಯೂ ವಿವಿಧಭಾರತಿಯ ಛಾಯಾಗೀತ್, ಆಪ್ ಕೀ ಫರ್ಮಾಯಿಶ್, ಸಂಗೀತ್ ಸರಿತಾ, ಹವಾಮಹಲ್ ಮುಂತಾದ ಕಾರ್ಯಕ್ರಮಗಳು, ಶ್ರೀಲಂಕಾ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್‌ನಿಂದ ಹಿಂದೀ ಹಾಡುಗಳ ಸುಗ್ರಾಸಭೋಜನ, ಅಮೀನ್ ಸಯಾನಿಯ ಬಿನಾಕಾ ಗೀತ್‌ಮಾಲಾ ಪಂಚಭಕ್ಷ್ಯಪರಮಾನ್ನ... ಎಂಬತ್ತರ ದಶಕದ ಹೊತ್ತಿಗೆ ದೂರದರ್ಶನದ ದರ್ಶನಭಾಗ್ಯ. ರಾಮಾಯಣ ಮತ್ತು ಮಹಾಭಾರತ ಅಷ್ಟೇ‌ಅಲ್ಲ ಅಲಿಫ್ ಲೈಲಾ, ಬುನಿಯಾದ್, ಭಾರತ್ ಏಕ್ ಖೋಜ್, ಚಂದ್ರಕಾಂತಾ, ಚಾಣಕ್ಯ, ಫ್ಲಾಪ್ ಶೋ, ಫೌಜಿ, ಮೌಗ್ಲೀ, ಮಾಲ್ಗುಡೀ ಡೇಸ್, ನುಕ್ಕಡ್, ಶಕ್ತಿಮಾನ್, ಸುರಭಿ... ಒಂದೇ ಎರಡೇ! ಶುದ್ಧ ಸ್ವಸ್ಥ ಮನೋರಂಜನೆಯ, ಜ್ಞಾನಾರ್ಜನೆಯ ಸುಭಿಕ್ಷ ಕಾಲ! ಆಗ ಹಿಂದೀ ಭಾಷೆ ಎಲ್ಲರಿಗೂ ಆಪ್ಯಾಯಮಾನವಾಗಿಯೇ ಇತ್ತಲ್ಲ? 

ಹಿಂದಿಯೇತರ ರಾಜ್ಯಗಳಲ್ಲಿ ಅಂಚೆಕಚೇರಿ ಬ್ಯಾಂಕು ಮತ್ತಿತರ ಸಾರ್ವಜನಿಕ ಸೇವೆಗಳು ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೂ ಇರಬೇಕು, ಇಂಗ್ಲಿಷ್ ಮತ್ತು ಹಿಂದೀ ಮಾತ್ರ ಬಳಕೆಯಲ್ಲಿದ್ದರೆ ಕಷ್ಟವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ತ್ರಿಭಾಷಾ ಸೂತ್ರವನ್ನು ದೇಶದಾದ್ಯಂತ ಅನುಷ್ಠಾನಕ್ಕೆ ತಂದರೆ ಆ ಸಮಸ್ಯೆಯೇ ಉದ್ಭವಿಸುವುದಿಲ್ಲವಲ್ಲ? ಪ್ರಾಥಮಿಕ ಶಿಕ್ಷಣದಲ್ಲಿ ಮಗುವಿಗೆ ಹಂತಹಂತವಾಗಿ ಮೂರು ಭಾಷೆಗಳ ಕಲಿಕೆ. 1) ಪ್ರಾದೇಶಿಕ ಭಾಷೆ. ಕರ್ನಾಟಕದಲ್ಲಾದರೆ ಕನ್ನಡ. 2) ಪ್ರಾದೇಶಿಕ ಭಾಷೆಯ ತಳಹದಿಯಿಂದಲೇ ಕಲಿಯಬಹುದಾದ, ದೇಶದ ಬಹುಭಾಗದಲ್ಲಿ ಬಳಸಲಿಕ್ಕೆ ಸಾಧ್ಯವಾಗುವ, ನಮ್ಮ ದೇಶದ್ದೇ ಇನ್ನೊಂದು ಭಾಷೆ. ಸದ್ಯಕ್ಕೆ ಹಿಂದೀಗೆ ಆ ಅರ್ಹತೆ ಹೆಚ್ಚು ಇರುವುದರಿಂದ ಹಿಂದೀ ಭಾಷೆ. 3) ಪ್ರಾಪಂಚಿಕ ನೆಲೆಯಲ್ಲಿ ಜ್ಞಾನಾರ್ಜನೆ ಮತ್ತು ಜೀವನಕೌಶಲ ಗಳಿಸಲಿಕ್ಕೆ ಇಂಗ್ಲಿಷ್ ಭಾಷೆ. ಮೂರಿದ್ದರೆ ಮಾರುತಿಯ ಬಲ! ಸಾಗರೋಲ್ಲಂಘನ ಮಾಡಿ ಪ್ರಪಂಚದ ಯಾವ ಮೂಲೆಯಲ್ಲೂ ಜೈ ಎನಿಸಿಕೊಳ್ಳಬಹುದು. ಹಿಂದೀ ಹೇರಿಕೆ ಎಂದು ಬೊಬ್ಬಿಡುವವರಿಗೆ, ತ್ರಿಭಾಷಾ ಸೂತ್ರ ಬೇಡವೆಂದು ಮೊಂಡು ಹಠ ಹಿಡಿಯುವವರಿಗೆ ಇದೇಕೆ ಅರ್ಥವಾಗುವುದಿಲ್ಲವೋ. ನನಗನಿಸುತ್ತದೆ ಒಂದು ತೆರನಾದ ಕೀಳರಿಮೆಯೇ ಇದಕ್ಕೆ ಕಾರಣ. ಕೀಳರಿಮೆಯ ಲಕ್ಷಣಗಳೇ ಅವು: ತನ್ನ ಬಗ್ಗೆ ಪ್ರೀತಿ ಇಲ್ಲ, ಬೇರೆಯವರ ಬಗ್ಗೆ ಈರ್ಷ್ಯೆ, ದ್ವೇಷ, ಸಂಶಯ. ಕಂಫರ್ಟ್ ಝೋನ್‌ನಿಂದ ಹೊರಬರಲಿಕ್ಕೆ ತಯಾರಿಲ್ಲ. ಹಿಂದೀ ಹೇರಿಕೆಯೆಂದು ಬೊಬ್ಬಿಡುವವರದೂ ಅವೇ ಲಕ್ಷಣಗಳು: ಮಾತೃಭಾಷೆಯ ಮೇಲೆ ಪ್ರೀತಿ ಇಲ್ಲ. ಹಿಂದೀಯ ಬಗ್ಗೆ ಈರ್ಷ್ಯೆ, ದ್ವೇಷ. ಎಲ್ಲಿ ತನ್ನ ಮೇಲೆ ಹೇರುತ್ತಾರೋ ಎಂದು ಸಂಶಯ. ಇಲ್ಲದಿದ್ದರೆ, ಕರ್ನಾಟಕದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ಮೈಲಿಗಲ್ಲುಗಳು ಬಹುತೇಕವಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿದ್ದು ನಡುನಡುವೆ ಒಂದು ಹಿಂದೀಯದೂ ಇದ್ದರೆ ಇವರಿಗೇಕೆ ಸಂಕಟ? ಬೆಂಗಳೂರು ಮೆಟ್ರೊದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಫಲಕಗಳೊಂದಿಗೆ ಹಿಂದೀಯವೂ ಇದ್ದರೆ ಇವರಿಗೇನು ನಷ್ಟ? ಆ ಕನ್ನಡ ಫಲಕಗಳಾದರೂ ಸರಿಯಾಗಿ ಇರುತ್ತವೆಯೇ ಎಂದರೆ ಅದೂ ಇಲ್ಲ. Train Coaches ಅಂದರೆ ರೈಲು ಬೋಗಿಗಳಲ್ಲ ‘ರೈಲು ತರಬೇತುದಾರರು’ ಅಂತೆ! Inflammable Articles ಅಂದರೆ ದಹ್ಯ ವಸ್ತುಗಳಲ್ಲ, ‘ಉರಿಯೂತದ ಲೇಖನಗಳು’ ಅಂತೆ! ರೈಲ್ವೇನಿಲ್ದಾಣಗಳಲ್ಲಿ ಕಾಣಸಿಗುವ ದ್ವಿಭಾಷಾ ಆಣಿಮುತ್ತುಗಳಿವು.

ಗಾಂಧೀಜಿಯವರು ಹೇಳಿದ್ದೆನ್ನಲಾದ ಒಂದು ಪ್ರಖ್ಯಾತ ಮಾತು, ಭಾಷೆಗಳ ವಿಚಾರದಲ್ಲೂ ಸತ್ಯವೇ. ‘ನನ್ನ ಮನೆಯ ಕಿಟಕಿ-ಬಾಗಿಲುಗಳೆಲ್ಲ ಮುಚ್ಚಿ ಒಳಗೆ ಉಸಿರುಗಟ್ಟುವ ಪರಿಸ್ಥಿತಿ ಉಂಟಾಗುವುದು ನನಗಿಷ್ಟವಿಲ್ಲ. ಕಿಟಕಿಗಳನ್ನು ತೆರೆದಿಟ್ಟು ಹೊರಗಿನಿಂದ ಬರುವ ತಂಗಾಳಿಯು ಮನೆಯೊಳಗೆಲ್ಲ ಪಸರಿಸುವುದನ್ನು ನಾನು ಬಯಸುತ್ತೇನೆ. ಹಾಗಂತ, ಅದೇ ಬಿರುಗಾಳಿಯಾಗಿ ನನ್ನ ಮನೆಯನ್ನೇ ಕಿತ್ತೊಗೆಯುವುದನ್ನು ನಾನು ಖಂಡಿತ ಸ್ವೀಕರಿಸಲಾರೆ.’ ತ್ರಿಭಾಷಾ ಸೂತ್ರ ಬೇಡ, ಏನೂ ಬೇಡ. ನಾವು ನಮ್ಮ ಭಾಷೆಯೊಂದನ್ನೇ ಕಲಿಯುತ್ತೇವೆ ಎನ್ನುವವರು ತಮಗೆ ತಾವೇ ಉಸಿರುಗಟ್ಟುವ ಪರಿಸ್ಥಿತಿ ತಂದುಕೊಳ್ಳುವವರು. ತಮಿಳುನಾಡಿನ ಭಾಷಾಂಧರು, ಮತ್ತು ಅವರ ಅಂಧಾನುಕರಣೆ ಮಾಡುವ ಕೆಲವು ಕನ್ನಡಿಗರು ಅಂಥವರು. ಮಾತೃಭಾಷೆಯನ್ನು ಪ್ರೀತಿಸುತ್ತಲೇ ಬೇರೆ ಭಾಷೆಗಳನ್ನೂ ಹೆಚ್ಚುಹೆಚ್ಚು ಕಲಿಯುವವರು ಮನೆಯ ಕಿಟಕಿಗಳನ್ನು ತಂಗಾಳಿಗೆ ತೆರೆದಿಡುವವರು. ದಕ್ಷಿಣಕನ್ನಡ ಜಿಲ್ಲೆಯವರು ಅಂಥವರು. ಆದ್ದರಿಂದಲೇ ಮತ್ತೊಮ್ಮೆ ಹೇಳುತ್ತಿದ್ದೇನೆ- ‘ಹಿಂದೀ ಭಾಷೆ’ ಎಂಬ ಚೆಂದುಳ್ಳಿ ಚೆಲುವೆಯೇ, ನನಗಂತೂ ನೀನೂ ಪ್ರೀತಿಯವಳೇ, ನಿನ್ನಂಥ ಎಲ್ಲ ಭಾಷೆಗಳೂ ಪ್ರೀತಿಯವುಗಳೇ. ನಿಮ್ಮೆಲ್ಲರ ಪ್ರಾಮುಖ್ಯವನ್ನು ನಾನು ಸಂಪೂರ್ಣ ಅರಿತಿದ್ದೇನೆ. ಅದಕ್ಕೆಂದೇ ಚಿರ‌ಋಣಿಯಾಗಿರುತ್ತೇನೆ.

* * *
Reply all
Reply to author
Forward
0 new messages