ಈ ಎಳೆಯನ್ನ ನಮ್ಮ ಈ ಕವಿ/ಸಾಹಿತಿಗಳ ಮತ್ತು ಅವರ ಕೃತಿ ಪರಿಚಯ ಮಾಡಿಕೊಳ್ಳಲು
ಪ್ರಾರಂಭಿಸುತ್ತಿದ್ದೇನೆ.
ನನ್ನ ನೆಚ್ಚಿನ ಕವಿ ಕುಮಾರವ್ಯಾಸನ ಸಣ್ಣ ಪರಿಚಯ ಇಲ್ಲಿದೆ.
ಕುಮಾರವ್ಯಾಸ ನೆಂದೇ ಪ್ರಸಿದ್ದನಾಗಿರುವ ನಾರಣಪ್ಪ ಕನ್ನಡ ಸಾಹಿತ್ಯಲೋಕದ ಒಂದು
ಅನರ್ಘ್ಯ ರತ್ನ. ಸುಮಾರು ೧೪ - ೧೫ ನೇ ಶತಮಾನದವನೆಂಬ ನಂಬಿಕೆ. ಗದುಗಿನ ಬಳಿಯ
ಕೋಳಿವಾಡದಲ್ಲಿ ವಾಸಿಸುತ್ತಿದ್ದನೆಂಬ ಮಾಹಿತಿಗಳಿವೆ. ಮಹಾಭಾರತದ ಕಥೆಯನ್ನ
ಕನ್ನಡದಲ್ಲಿ ಬರೆದಿರುವ ಇವನ ಕಾವ್ಯ ಕರ್ನಾಟ ಭಾರತ ಕಥಾಮಂಜರಿ "ಕುಮಾರವ್ಯಾಸ ಭಾರತ "
ವೆಂದೇ ಪ್ರಖ್ಯಾತವಾಗಿದೆ. ಇದನ್ನು ನಡುಗನ್ನಡದಲ್ಲಿ ಭಾಮಿನಿ ಷಟ್ಪದಿಯನ್ನುಪಯೋಗಿಸಿ
ಬರೆದಿದ್ದಾನೆ.
ಇದನ್ನು ಓದಿದ ನಮ್ಮ ರಾಷ್ಟ್ರಕವಿ ಕುವೆಂಪು -
"ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು,ಮೈಯಲಿ ಮಿಂಚಿನ ಹೊಳೆತುಳುಕಾಡುವುದು"
ಎಂದು ಹಾಡಿ ಹೊಗಳಿದ್ದಾರೆ.
ಗದುಗಿನ ವೀರನಾರಾಯಣನ ಮಂದಿರದಲ್ಲಿ ಸಾಕ್ಷಾತ್ ನಾರಾಯಣನೇ ಕಂಬದ ಹಿಂದೆ ನಿಂತು
ಕಾವ್ಯವನ್ನ ಬರೆಸುತ್ತಿದ್ದನೆಂಬ ದಂತಕಥೆಯಿದೆ. ಕಂಬದ ಹಿಂದೆ ಯಾರಿದ್ದಾರೆಂಬ
ಕುತೂಹಲವನ್ನು ತಡೆಯಲಾರದೆ ನಾರಣಪ್ಪ ಹಿಂದಿರುಗಿ ನೋಡಿದ ದಿನದಿಂದ ಕಥಾಪಠಣ
ನಿಲ್ಲಿತೆಂಬ ಪ್ರತೀತಿ. ಮಹಾಭಾರತದ ೧೮ ಅಧ್ಯಾಯಗಳಲ್ಲಿ ಬರೀ ೧೦ ಅಧ್ಯಾಯಗಳು ಮಾತ್ರ ಈ
ಕಾವ್ಯದಲ್ಲಿರಲು ಇದೇ ಕಾರಣವೆಂಬ ನಂಬಿಕೆ ಈಗಲೂ ಜನರಲ್ಲಿದೆ.
ಮೊದಲನೇ ಸಂಧಿಯಾದ ಪೀಠಿಕಾ ಸಂಧಿ ಯ ಕೆಲವು ಪದ್ಯಗಳನ್ನ ಇಲ್ಲಿ ಉಲ್ಲೇಖಿಸಿದ್ದೇನೆ -
ಶ್ರೀ ವನಿತೆಯರಸನೆ ವಿಮಲ ರಾ
ಜೀವ ಪೀಠ ನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಖರ ದಾತಾರ
ರಾವಣಾಸುರ ಮಥನ ಶ್ರವಣಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಾಯಣ.
ಮಹಾಲಕ್ಷ್ಮಿಯ ಪ್ರಭು ,ಸೃಷ್ಟಿ ಕರ್ತನಾದ ಪಿತಾಮಹ ಬ್ರಹ್ಮನ ತಂದೆ, ಶುದ್ದ ಸ್ವರೂಪಿ
ಸನಕಾದಿ ಸಜ್ಜನರು - ಸನಕ ಸಜ್ಜನ ಸನತ್ಕುಮಾರ
ಸನತ್ಹ್ಸುಜಾಥರನ್ನು ಲೋಕಹಿತಾರ್ಥಕ್ಕಾಗಿ ಕಳಿಸಿಕೊಡುವವನು, ರಾವಣನನ್ನು ಕೊಂದವನು, ಈ
ಹೊಸ ಕಥೆಗೆ ಕಾರಣನಾದ ಗದುಗಿನ ವೀರ ನಾರಾಯಣ ತನ್ನ ಭಕ್ತರನ್ನ (ಆನತ ಜನವ) ಕಾಯುತ್ತಾನೆ
(ಕಾವುದು).
ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ
ಚಂದ್ರ(ಸರಿಸಿಜಾರಿ = ಸರಸಿಜ + ಅರಿ) ಕಿರಣಗಳಂತೆ ಪ್ರಕಾಶಮಾನವಾದ ಮತ್ತು ಮುಂಗುರುಳು
(ಕುಂತಳ) ಕುಣಿಯುತ್ತಿರುವ ಹಣೆಯ ಮೇಲೆ ರತ್ನಖಚಿತವಾದ ಕಿರೀಟವನ್ನಿಟ್ಟುಕೊಂಡಿರುವ,
ಆನೆಯ (ಕರಿ) ಮುಖದ, ಪಾಶ ಮತ್ತು ಮೋದಕಗಳನ್ನು ಕೈಯಲ್ಲಿ ಹಿಡಿದಿರುವ
ದೊಡ್ಡದಾದ(ವಿಸ್ತರದ) ಗಣಪತಿ ಈ ನನ್ನ ಕೆಲಸ ನಿರ್ವಿಘ್ನವಾಗಿ ನಡೆಯಲಿ ಎಂದು
ಪ್ರಾರ್ಥಿಸುತ್ತಿದ್ದಾನೆ ಕವಿ.
ಈ ಕಾವ್ಯ ಹೇಗೆ ಎಲ್ಲ ಬಗೆಯ ಜನರಿಗೂ ರುಚಿಸುತ್ತದೆ ಎಂಬುದಕ್ಕೆ ಕುಮಾರವ್ಯಾಸ ಹೀಗೆ
ಬರೆಯುತ್ತಾನೆ -
ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ
ರಾಜರಿಗೆ ಬೇಕಾದ ಧೈರ್ಯ-ಶೌರ್ಯ-ಸಾಹಸಗಳಿದರಲ್ಲಿದೆ, ಬ್ರಾಹ್ಮಣರಿಗೆ ಇದು ವೇದದ ಸಾರ,
ಯೋಗಿಗಳಿಗೆ ಬೇಕಾದ ತತ್ವ ಇದರಲ್ಲಿದೆ, ಮಂತ್ರಿಗಳಿಗೆ ಬೇಕಾದ ಚಾಣಕ್ಷತೆ
ಬುದ್ದಿವಂತಿಕೆ ಇಲ್ಲಿದೆ, ಶೃಂಗಾರ ಕೂಡ ಇದೆ, ವಿದ್ಯಾವಂತರಿಗೆ ಇಷ್ಟವಾಗುವ
ವ್ಯಾಕರಣವೂ (ಅಲಂಕಾರ) ಇದೆ. ಇಷ್ಟೆಲ್ಲಾ ಇರೋ ಇದು ಹೇಗಿದೆ ಅಂದ್ರೆ, ಕಾವ್ಯಗಳಿಗೆ
ಗುರು - ಅತ್ತ್ಯುತ್ತಮವಾದ ಕೃತಿ. ಇಂಥಾ ಕಾವ್ಯವನ್ನ ಬರೀತಿದಾನೆ ಕುಮಾರವ್ಯಾಸ ಅಂತ
ಕವಿ ಹೇಳುತ್ತಾನೆ
ಈ ಕಾವ್ಯದ ಕಥಾವಸ್ತು -
ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪ ರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ
ಕೃಷ್ಣನ ಕಥೆಯನ್ನ ಎಲ್ಲರೂ ಮೆಚ್ಚುವಂತೆ ಹೇಳುತ್ತಿದ್ದೇನೆ. ಆದರೆ ಹೇಳುತ್ತಿರುವುದು
ಕೃಷ್ಣ ಮೆಚ್ಚಲಿ ಅಂತ! ಈ ಕಥೆಯನ್ನ ಓದಿದವರಿಗೆ ಜನ್ಮಜನ್ಮಾಂತರದ ಪಾಪ ನಾಶವಾಗತ್ತೆ
ಅಂತ ಹೇಳ್ತಾನೆ ನಾರಣಪ್ಪ.
ಆದರದಿಂದ ಬರೀ ಒಂದೇ ಒಂದು ಅಕ್ಷರವನ್ನ ಈ ಕಾವ್ಯದಿಂದ ಕೇಳಿದವರಿಗೆ ಈ ಕೆಳಗಿನ ಎಲ್ಲ
ಫಲಗಳೂ ದೊರೆಯುತ್ತವೆ ಎಂದು ಕವಿ ಹೆಮ್ಮೆಯಿಂದ ಹೇಳುತ್ತಾನೆ -
ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ
ಈ ಕಾವ್ಯವನ್ನ ಇ-ಪುಸ್ತಕವಾಗಿ ದೊರಕುವಂತೆ ಮಾಡುವ ಪ್ರಯತ್ನ ನಡೆದಿದೆ. ಬಹಳಷ್ಟು
ಪದ್ಯಗಳು ಜಾಲತರಂಗದಲ್ಲಿ ಲಭ್ಯವಿದೆ. ಓದಲಿಚ್ಛಿಸುವವರು ಈ link ಉಪಯೋಗಿಸಿ -
http://gaduginabharata.blogspot.com/2010/01/blog-post_1551.html
ಭಾವಸಮ್ಮಿಳನದ ಸದಸ್ಯರು ತಮ್ಮ ನೆಚ್ಚಿನ ಕವಿ/ಸಾಹಿತಿಗಳ ಪರಿಚಯ ಮಾಡಿಸುವರೆಂಬ
ಆಶಯ ... ನಿಮ್ಮ ಬರಹಗಳನ್ನು ಈ ಎಳೆಗೇ post ಮಾಡಬೇಕಾಗಿ ವಿನಂತಿ. ಆಗ ಎಲ್ಲ ವಿವರಗಳೂ
ಒಂದೇ ಎಳೆಯಲ್ಲಿದ್ದು, ಓದುಗರಿಗೆ ಸುಲಭವಾಗಿ ಸಿಗುತ್ತದೆ
ಧನ್ಯವಾದಗಳು
ನೀವು ಕೇಳಿದ ಪದ್ಯ ಮತ್ತು ಅದರ ಅರ್ಥ -
ವೇದ ಪುರುಷನ ಸುತನ ಸುತನ ಸ-
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನನತುಳಭುಜಬಳದಿ
ಕಾದಿ ಗೆಲಿದ ನನಣ್ಣನವ್ವೆಯ
ನಾದಿನಿಯ ಜಠರ ದಲಿ ಜನಿಸಿದ
ನಾದಿಮೂರುತಿಸಲಹೋ ಗದುಗಿನ ವೀರನಾರಾಯಣ
ವೇದ ಪುರುಷನ =ನಾರಾಯಣನ
ಸುತನ=ಮಗನಾದ ಬ್ರಹ್ಮನ
ಸುತನ=ಮಗನಾದ ನಾರದನ
ಸಹೋದರನ=ತಮ್ಮನಾದ ಕಶ್ಯಪನ
ಹೆಮ್ಮಗನ=ಹಿರಿಯ ಮಗನಾದ ಇಂದ್ರನ
ಮಗನ=ಅರ್ಜುನನ
ತಳೋದರಿಯ=ಪತ್ನಿಯಾದ ಸುಭದ್ರೆಯ
ಮಾತುಳನ=ಸೋದರಮಾವನಾದ ಕಂಸನ
ಮಾವನನು=ಮಾವನಾದ ಜರಾಸಂದನನು
ಅತುಳ ಭುಜ ಬಲದಿ ಕಾದಿ ಗೆಲಿದನ=ಅಸಮಾನವಾದ ಭುಜ ಬಲದಿಂದ ಹೋರಾಡಿ ಗೆದ್ದ ಭೀಮನ
ಅಣ್ಣನ =ಅಣ್ಣನಾದ ಧರ್ಮಜನ
ಅವ್ವೆಯ=ತಾಯಿಯಾದ ಕುಂತಿಯ
ನಾದಿನಿಯ=ನಾದಿನಿಯಾದ ದೇವಕಿಯ
ಜಠರದಲಿ ಜನಿಸಿದ =ಹೊಟ್ಟೆಯಲ್ಲಿ ಹುಟ್ಟಿದ
ಅನಾದಿ ಮೂರ್ತಿಯಾದ ಶ್ರೀ ಕೃಷ್ಣನೇ
ಗದುಗಿನ ವೀರ ನಾರಾಯಣನೆ
ಸಲಹೋ=ನೀನು ನಮ್ಮನ್ನು ಕಾಪಾಡು
On Aug 17, 11:21 am, Uma Venkatesh <venkatesh....@gmail.com> wrote:
> ಅನು,
> ಬಹಳ ಅರ್ಥವತ್ತಾಗಿದೆ. ಕುಮಾರವ್ಯಾಸನ ಭಾರತದ ಕೊಡುಗೆ ನಮ್ಮ ಕನ್ನಡ ಸಾಹಿತ್ಯಕ್ಕೊಂದು ಅಪಾರ
> ಆಸ್ತಿ. ಕುಮಾರ ವ್ಯಾಸನು ನುಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂಬ ಕವಿ ಕುವೆಂಪು ಅವರ
> ಕವನ ನೂರಕ್ಕೆ ನೂರು ಸತ್ಯ. ನನಗೆ ಈ ಗ್ರಂಥದ ಕಡೆಯಲ್ಲಿ ಅವ್ರು ಬರೆದ *" ವೇದ ಸುತನ *"
> ಪದ್ಯದ ಅರ್ಥ ನಂಗೆ ಬಹಳ ಇಷ್ತ್ತ. ಭಾರತದ ಕಥಾನಾಯಕ ಕೃಷ್ಣನ ಜನ್ಮದ ಮೂಲವನ್ನು ಅದೆಷ್ಟು
> ಚತುರತೆಯಿಂದ ನಮಗೆ ತಿಳಿಸಿರುತ್ತಾನೆ ಈ ಕವಿ. ಆ ಪದ್ಯವನ್ನು ಈ ಎಳೆಯಲ್ಲಿ ಸೇರಿಸಿ ಅದರ
> ಅರ್ಥವನ್ನು ಎಲ್ಲರಿಗೆ ತಿಳಿಸಿದರೆ ಚೆನ್ನ.
> ಉಮಾ.
>
> 2011/8/17 Anu Anand <annapoornaan...@googlemail.com>
> ...
>
> read more »- Hide quoted text -
>
> - Show quoted text -
"ಕವಿ ಕೃತಿ ಪರಿಚಯ" ಕ್ಕೆ ಮಾಸ್ತಿಯವರ ಕಾದಂಬರಿಯನ್ನು ಸೇರಿಸುತ್ತಿದ್ದೇನೆ ...
ಮಾಸ್ತಿಯವರ ಜ್ನಾನಪೀಠ ಪ್ರಶಸ್ತಿ ವಿಜೇತ ಪುಸ್ತಕ ಚಿಕವೀರರಾಜೇಂದ್ರ ಕೊಡಗಿನ ಕಡೇ
ರಾಜನ ಕಥೆ. ನಾಟಕವಾಗಿ ಬರೆಯಬೇಕೆಂದಿದ್ದ ಕಥಾವಸ್ತುವನ್ನು ಕಡೆಗೆ ಕಥೆಯನ್ನಾಗಿ
ರೂಪಿಸಿದ್ದಾರೆ ಮಾಸ್ತಿ.
ಮದಿರೆಗೆ ದಾಸನಾಗಿ ತನ್ನ ಪದವಿಗೆ ಮತ್ತು ಪ್ರಜೆಗಳಿಗೆ ಮಾರಕನಾಗುವ ರಾಜ, ಅವನ
ಕುಬುದ್ಧಿಗೆ ಕುಮ್ಮಕ್ಕುಕೊಡುವ ಆಪ್ತ ಮಂತ್ರಿ,ಸ್ವಾಮಿನಿಷ್ಠೆಯನ್ನು ಬಿಡದ
ಮುಖ್ಯಮಂತ್ರಿ ಮತ್ತು ಇತರೆ ರಾಜ ಸೇವಕರು, ಗಂಡನ ದುರ್ನಡತೆಯನ್ನೆಲ್ಲಾ ಮನ್ನಿಸಿ
ಕುಲಗೌರವವನ್ನು ಕಾಪಾಡಲು ಯಾವಾಗಲೂ ಮುಂದಾಗಿರುವ ರಾಣಿ, ರಾಜ ಪದವಿಗೆ ಆಸೆಪಟ್ಟು
ರಾಜನಿಗೆ ವಿರುದ್ಧವಾಗಿ ಕೆಲಸ ಮಾಡುವ ಭಾವಮೈದುನ, ಈ ಒಳಜಗಳವನ್ನು
ದುರಪಯೋಗಪಡಿಸಿಕೊಂಡು ರಾಜ್ಯವನ್ನು ಕಬಳಿಸಲು ಉತ್ಸುಕರಾಗಿರುವ ಬ್ರಿಟಿಷರು, ಇಷ್ಟರ
ಮಧ್ಯೆ ಜನರನ್ನು ಮತಾಂತರಿಸಲು ಸಮಯ ಕಾಯುತ್ತಿರುವ ಕ್ರೈಸ್ತಪಾದ್ರಿಗಳು - ಹೀಗೆ
ಪ್ರತಿಯೊಂದು ಪಾತ್ರವೂ ಇತಿಹಾಸವನ್ನ ನಮ್ಮ ಕಣ್ಣಮುಂದೆ ತಂದು ನಿಲ್ಲಿಸುತ್ತೆ! ಪುಸ್ತಕ
ಓದುತ್ತಿದ್ದಾಗ ಆ ಕಾಲದ ಕೊಡಗಿನಲ್ಲಿ ನಾನೂ ಒಬ್ಬಳಾಗಿದ್ದೆಯೆಂದರೆ
ಅತಿಶಯೋಕ್ತಿಯಲ್ಲ!
ಅಂತೂ ಒಂದು ಸಂಸ್ಥಾನದ ಅವಸಾನಕ್ಕೆ ಬೇಕಾದ ಎಲ್ಲ ಪಾತ್ರಗಳು, ಪ್ರಸಂಗಗಳು ಒಟ್ಟಿಗೇ
ಮೇಳೈಸಿದ್ದವು. ಒಗ್ಗಟ್ಟಿಲ್ಲದೇ ಪರರಿಗೆ ದೇಶವನ್ನು ಆಳಲುಬಿಟ್ಟ ಮತ್ತೊಂದು ಪ್ರಕರಣ!
ಇತಿಹಾಸವನ್ನ ಇತಿಹಾಸವಾಗೇ ಬರೆದು ಓದುಗನನ್ನ ಹಿಡಿದಿಟ್ಟುಕೊಳ್ಳೋದು ಬಹಳ ಕಷ್ಟ ಆದ್ರೆ
ಮಾಸ್ತಿ ಅವರು ಅದನ್ನ ಲೀಲಾಜಾಲವಾಗಿ ಸಾಧಿಸಿದ್ದಾರೆ. ಆಧಾರಸಹಿತವಾದ ಕಥಾವಸ್ತುವನ್ನು
ಹೆಚ್ಚಿನ ಕಲ್ಪನೆ ಬೆರೆಸದೆ ನೈಜವಾಗಿ ನಿರೂಪಿದ್ದಾರೆ ಮಾಸ್ತಿ. ಓದಕ್ಕೆ ಶುರು ಮಾಡಿದ
ಮೇಲೆ ಪುಸ್ತಕಾನ ಕೆಳಗಿಡಕ್ಕೆ ಮನಸ್ಸು ಬರಲಿಲ್ಲ!
ಇದೇ ರೀತಿ ಇರುವ ಇನ್ನೊಂದು ಪುಸ್ತಕ "splendours of royal mysore". ಬೆಂಗಳೂರಿನ
ಪ್ರತಿಭಾವಂತ ಯುವ ಲೇಖಕ ವಿಕ್ರಮ್ ಸಂಪತ್ ಬರೆದಿರೋದು. ನೀವುಗಳು ಓದಿಲ್ದೆ ಇದ್ರೆ, i
definitely recommend. ತುಂಬಾ ಚೆನ್ನಾಗಿದೆ. ಕನ್ನಡಿಗರೆಲ್ಲಾ ಓದಬೇಕಾದ ಪುಸ್ತಕ
ಅಂತ ನನ್ನ ಭಾವನೆ. ಮೈಸೂರು ಒಡೆಯರ ವಂಶದ ಘಟಣಾವಳಿಗಳ ನಿರೂಪಣೆ ಬಹಳ ಸೊಗಸಾಗಿದೆ
Thank you :)