ಮಾನ್ಯರೇ,
ಈ ಸಂದೇಶವನ್ನು ನಾನು ಬೆಂಗಳೂರಿನಿಂದ ಬರೆಯುತ್ತಿದ್ದೇನೆ. ಇದು ಯಾವುದೇ ವ್ಯಾವಹಾರಿಕ
ಸಂದೇಶವಾಗಿರದೆ ಒಂದು ವೈಯಕ್ತಿಕ ಅಭಿಪ್ರಾಯ ಹಾಗು ಅನುಭವವನ್ನು ಹಂಚಿಕೊಳ್ಳುವ ಒಂದು
ಸಣ್ಣ ಆಸೆಯೊಂದಿಗೆ ಬರೆಯುತ್ತಿದ್ದೇನೆ. ಸಧ್ಯಕ್ಕೆ ನಾನು ಕ್ಲಿನಿಕಲ್ ರಿಸರ್ಚ್
ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮಾಡುತ್ತಿರುವ ವೃತ್ತಿ ಬೇರೆಯಾದರೂ
ಕನ್ನಡ ಭಾಷೆ ಮತ್ತು ಸಾಹಿತ್ಯದ ಕಡೆಗೆ ಅಪಾರ ಒಲವನ್ನು ಇರಿಸಿಕೊಂಡಿದ್ದೇನೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕೆಲಸದ ನಿಮಿತ್ತ ನಾನು ಇಂಗ್ಲೆಂಡಿಗೆ ಒಂದು ತಿಂಗಳ
ಕಾಲ ಬಂದಿದ್ದೆ. ಆಗ ನಾನು ಕಂಡ ಒಂದು ಸಂಗತಿಯನ್ನು ಹೇಳಬಯಸುತ್ತೇನೆ: ಎಷ್ಟೊಂದು ಜನ
ಕನ್ನಡಿಗರು ಇಂದು ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ದೂರ ದೇಶದಲ್ಲಿರುವ ಅವರು ನಮ್ಮ
ಭಾಷೆ, ಸಂಸ್ಕೃತಿಯನ್ನು ಮರೆಯುವ, ಕಳೆದುಕೊಳ್ಳುವ ಭೀತಿಯಲ್ಲಿ ಒಕ್ಕೂಟ, ಸಂಘಗಳನ್ನು
ಮಾಡಿಕೊಳ್ಳುವುದು ಅನಿವಾರ್ಯವೇ ಆಗಿದೆ. ಇದಕ್ಕೆ ಕುರುಹು ಎಂಬಂತೆ ಉತ್ತರ ಭಾರತೀಯರು
south hall ಎನ್ನುವ ತಮ್ಮದೇ ಊರನ್ನು ಕಟ್ಟಿಕೊಂಡಿರುವುದು, ಹಾಗೂ ಬರಿ ಇಂಗ್ಲೀಷ್
ಚಾನೆಲ್ ಗಳೇ ತುಂಬಿರುವ ಆ ನೆಲದಲ್ಲಿ ತಮ್ಮದೇ ಒಂದು ಸ್ವಂತ ಆಕಾಶವಾಣಿ ಕೇಂದ್ರದ
ಮುಖಾಂತರ ತಮ್ಮ ಹಾಡುಗಳನ್ನು ಸವಿಯುವುದು ನನಗೆ ಇನ್ನೂ ಆಶ್ಚರ್ಯವನ್ನು ತಂದಿದೆ..ಆ
ನೆಲದಲ್ಲಿ ಕನ್ನಡ ಹಾಡುಗಳನ್ನು ಕೇಳುವ, ಸುಖಿಸುವ ಸೌಭಾಗ್ಯ ನಮಗೂ ಇದ್ದಿದ್ದರೆ ಇನ್ನೂ
ಚೆನ್ನ ಅಲ್ಲವೇ ಎಂಬ ಯೋಚನೆಯೂ ಹೊಳೆಯಿತು. ಹೌದು, ಬೆಂಗಳೂರಲ್ಲಿ ಎಷ್ಟೊಂದು ಆಕಾಶವಾಣಿ
ಕೇಂದ್ರಗಳು ಕನ್ನಡ ಹಾಡುಗಳನ್ನು ಬಿತ್ತರಿಸಿ ಕನ್ನಡಿಗರನ್ನು ಸೆಳೆಯುವಲ್ಲಿ
ಸಫಲವಾಗಿವೆ. ಆದರೆ ದೂರ ದೇಶದ ಕನ್ನಡಿಗರಿಗೆ ಅದೇ ಥರದ ಒಂದು ಅವಕಾಶವನ್ನು ಕಲ್ಪಿಸಿ
ಕೊಟ್ಟರೆ ಕನ್ನಡಿಗ ಧನ್ಯನಾಗುತ್ತಾನೆ!
ನಾನು ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಾಗ ನಮ್ಮ ತಂದೆಗೆ ನಾನು ತಲುಪಿದ ಬಗ್ಗೆ
ತಿಳಿಸೋಣವೆಂದು ಫೋನ್ ಮಾಡಿದೆ...ನಮ್ಮ ತಂದೆ ರಿಂಗ್ ಟೋನ್ "ಈ ಕನ್ನಡ ಮಣ್ಣನು
ಮರಿಬೇಡ..ಓ ಅಭಿಮಾನಿ..." ಹಾಡು ಕೇಳಿದಾಗ ನನಗೆ ರೋಮಾಂಚನ, ಆಶ್ಚರ್ಯ, ಹಾಗೂ ನನ್ನ
ಸಂದರ್ಭಕ್ಕೆ ಇದು ಎಷ್ಟು ಪ್ರಸ್ತುತವಲ್ಲವೇ ಎನಿಸಿತು! ಈ ತೆರನಾದ ಒಂದು ಸೌಖ್ಯವನ್ನು
ಅಲ್ಲಿರುವ ಪ್ರತಿಯೊಬ್ಬ ಕನ್ನಡಿಗನೂ ಅಲ್ಲಿ ಒಂದು ಆಕಾಶವಾಣಿಯ ಹಾಡುಗಳ ಮೂಲಕ
ಪಡೆಯುವಂತಾದರೆ ಸಾರ್ಥಕವೂ, ಯಶಸ್ವಿಯೂ ಆಗುವುದರಲ್ಲಿ ಸಂದೇಹವಿಲ್ಲ.
ತಮ್ಮ ಸಂಘದ ಚಟುವಟಿಕೆ, ಹಾಗೂ ಕಾರ್ಯಗಳನ್ನು ಕೆಲ ದಿನದಿಂದ ಗಮನಿಸುತ್ತ ಬಂದಿರುವ
ನಾನು, ಈ ಮೂಲಕ ವಿನಂತಿಸಿಕೊಳ್ಳುವುದೆಂದರೆ ನನ್ನ ಸಂದೇಶದ ಉದ್ದೇಶವನ್ನು ಅರ್ಥ
ಮಾಡಿಕೊಂಡು ಆ ನಿಟ್ಟಿನಲ್ಲಿ ತಮ್ಮ ಸದಸ್ಯರೊಂದಿಗೆ ಸೂಕ್ತಾ -ಸೂಕ್ತತೆ ಬಗ್ಗೆ
ಚರ್ಚಿಸಿ ನಿರ್ಧಾರ ಕೈಗೊಂಡರೆ ತಮ್ಮಿಂದ ತುಮಬ ಉಪಕಾರವಾಗುವುದು, ಮಾತ್ರವಲ್ಲದೆ
ಕನ್ನಡಮ್ಮನ ಕೀರ್ತಿ ಪತಾಕೆಯು ಇಂಗ್ಲೆಂಡಿನಲ್ಲೂ ಹಾರಾಡುವುದು!
ತಮ್ಮ ಯಾವುದೇ ಥರದ ಅಭಿಪ್ರಾಯ, ಸಲಹೆ, ಟಿಪ್ಪಣಿಗಳಿದ್ದರೆ ದಯವಿಟ್ಟು ಉತ್ತರ
ಬರೆಯಿರಿ..
ತಮ್ಮ ವಿಶ್ವಾಸಿ,
ಆನಂದ್.
ತಮ್ಮ ಆಪ್ತಸಂದೇಶವನ್ನು ಓದಿ ಆನಂದವಾಯಿತು. ತಾವು ಹೇಳಿದಹಾಗೆ ಈ ಆಂಗ್ಲದೇಶದಲ್ಲಿ
ಕನ್ನಡ ಆಕಾಶವಾಣಿ, ಕನ್ನಡ ಚಲನಚಿತ್ರ ಅಲ್ಲದೆ ಕನ್ನಡ ದೂರದರ್ಶಿನಿಗಳ ಅವಶ್ಯಕತೆ
ಬಹಳವಿದೆ. ಈ ದಿಕ್ಕಿನಲ್ಲಿ ಇಲ್ಲಿನ ಅನೇಕ ಕನ್ನಡಿಗರು ಈಗಾಗಲೇ ಅನೇಕ
ಆನ್ವೇಷಣೆಗಳನ್ನು ಮಾಡಿದ್ದಾರೆ. ಆದರೆ ಅದಾವೂ ಫಲಿಸಿಲ್ಲ. ಅದಕ್ಕೆ ಮುಖ್ಯಕಾರಣ
ಇಲ್ಲಿನ ಕನ್ನಡಿಗರಲ್ಲಿ ಹೆಚ್ಚು ಅಭಿಮತವಿಲ್ಲದೇ ಆಗಿದೆ. ಇದು ನನ್ನ ವೈಯುಕ್ತಿಕ
ಅಭಿಪ್ರಾಯ. ಪಂಜಾಬಿ, ತಮಿಳು ತೆಲುಗುಗಳ ದೂರದರ್ಶಿನಿಗಳು, ನೆರವಾಗಿ ಅಥವಾ ಭಾರತದಿಂದ
ಇಳುವರಿಸಿದ ಕಾರ್ಯಕ್ರಮಗಳು ಈಗಾಗಲೇ ಇಲ್ಲಿ ಲಬಿಸಿರುವಾಗ, ಕನ್ನಡದ ಕಾರ್ಯಕ್ರಮಗಳು
ಇಲ್ಲಿ ಏಕೆ ಇಲ್ಲವೆಂದು ದುರದರ್ಶಿನಿ ಉದ್ಯಮಕಾರರಿಗೆ ಕೇಳಿದಾಗ ತಿಳಿದುಬಂದ
ವಿಚಾರವೀನೆಂದರೆ, ಕನ್ನಡಿಗರಿಂದ ಸಾಕಷ್ಟು ಬೇಡಿಕೆ ಮತ್ತು ಅಭಿಮತವಿಲ್ಲದಿರುವುದೇ
ಆಗಿದೆ. ಈ ಆಂಗ್ಲದೇಶದಲ್ಲಿ ಮೂರುಸಾವಿರಕ್ಕೂ ಹೆಚ್ಚು ಕನ್ನಡಿಗರು ಇದ್ದಾರೆಂದು
ಪ್ರತೀತಿ. ಆದರೆ ಅವರೆಲ್ಲರೂ ಒಕ್ಕೂಡುವ ಸನ್ನಿವೇಶ ಒದಗಿಲ್ಲ. ಆದುದರಿಂದ ಈ ಬಗೆಯ
ವಿಷಯಗಳಿಗೆ ಮತ್ತು ಕನ್ನಡ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಹೆಚ್ಕುಗಮನಕೊಟ್ಟು
ವಿಚಾರವಿನಿಮಯ ಮಾಡಲೆಂದು ನಮ್ಮ ಸಂಗಡಿಗರು ಸೇರಿ 'ಭಾವ-ಸಂಗಮ' ಎಂಬ ಒಂದು
ಅಂತರಜಾಲವೇದಿಕೆಯನ್ನು ತೆರೆದಿದ್ದಾರೆ. ಅವೆದಿಕೆಗೆ ತಮ್ಮನ್ನು ಆಮಂತ್ರಿಸಿದ್ದಲ್ಲದೆ
ಅಲ್ಲಿ ತಮ್ಮ ಪತ್ರವನ್ನು ಪ್ರಕಟಿಸಿದ್ದೇನೆ. ಈ ವೇದಿಕೆಯಲ್ಲಿ ತಾವು ಭಾಗವಹಿಸುವರೆಂದು
ನಂಬಿದ್ದೇನೆ.